ಬಾಕಿ ಉಳಿದ ಮರಳು ಬ್ಲಾಕ್ಗಳ ಟೆಂಡರ್ ಪ್ರಕ್ರಿಯೆ ಕೂಡಲೇ ಪೂರ್ಣಗೊಳಿಸಲು ಸಚಿವರ ಸೂಚನೆ
ಮಂಗಳೂರು,ಜ.28, 2022: ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಮರಳಿನ 20 ಬ್ಲಾಕ್ಗಳ ಟೆಂಡರ್ ಪ್ರಕ್ರಿಯೆಯನ್ನು ಬರುವ ವಾರದೊಳಗೆ ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮುಖ್ಯಸ್ಥರನ್ನು ಕರ್ತವ್ಯದಿಂದಲೇ ಬಿಡುಗಡೆಗೊಳಿ, ಕಳುಹಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದರು.
ಅವರು ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರಾವಳಿ ನಿಯಂತ್ರಣ ವಲಯಕ್ಕೊಳಪಡದ ಪ್ರದೇಶದಲ್ಲಿ ಈ ಹಿಂದೆ 30 ಮರಳು ಬ್ಲಾಕ್ಗಳಿಗೆ ಕರೆಯಲಾಗಿದ್ದ ಇ-ಟೆಂಡರ್ ಪ್ರಕ್ರಿಯೆ ನ್ಯಾಯಲಯದ ಆದೇಶದಂತೆ ಮುಂದುವರಿಸಲಾಗಿದೆ, ಆದರೆ 20 ಮರಳು ಬ್ಲಾಕ್ಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೇ ಇರುವುದು ಅಧಿಕಾರಿಗಳ ನಿರಾಸಕ್ತಿ ಕಾರಣವಾಗಿದೆ, ಕೂಡಲೇ ಅವುಗಳೀಗೆ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಆ ಇಲಾಖೆಯ ಜಿಲ್ಲಾ ಮಟ್ಟದ ಮುಖ್ಯಸ್ಥರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಸಚಿವರು ತಿಳಿಸಿದರು.
ಮರಳಿಗೆ ಸಂಬಂಧಿಸಿದಂತೆ ಇರುವ 7 ಜನ ಸದಸ್ಯರ ಸಮಿತಿಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ರಚಿಸಲಾಗಿದೆ, ಸ್ಥಳೀಯ ಶಾಸಕರನ್ನು ಸಮಿತಿಗೆ ಸೇರಿಸಲು ಅವಕಾಶಗಳು ಲಭ್ಯವಿದ್ದಲ್ಲಿ ಅವರನ್ನು ಸೇರಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮರಳು ತೆಗೆಯುವುದು ಹಾಗೂ ಅನಧೀಕೃತ ಮರಳು ಸಾಗಾಟದ ಬಗ್ಗೆ ರಚಿಸಲಾದ ಸಮಿತಿಯಲ್ಲಿ ಸ್ಥಳೀಯ ಶಾಸಕರನ್ನು ಸೇರಿಸಿಕೊಳ್ಳುವಂತೆ ಶಾಸಕರಾದ ಉಮನಾಥ ಕೋಟ್ಯಾನ್ ಹಾಗೂ ರಾಜೇಶ್ ನಾಯಕ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಚಿವರು ತಿಳಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ರಾಜ್ಯದ 30 ಜಿಲ್ಲೆಗಳ ಎಲ್ಲಾ ಕಚೇರಿಗಳಲ್ಲೂ ಕಂಪ್ಯೂಟರ್ ಸಹಿತ ಅಗತ್ಯ ಸೌಲಭ್ಯ ಹಾಗೂ ವಾಹನಗಳನ್ನು ಒದಗಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದರು.
ಕರಾವಳಿ ನಿಯಂತ್ರಣ ವಲಯ ಹಾಗೂ ಕರಾವಳಿ ನಿಯಂತ್ರಣ ರಹಿತ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ ನಲವತ್ತು ಕಿಲೋ ಮೀಟರ್ಗೂ ಹೆಚ್ಚಿನ ಕರಾವಳಿ ಪ್ರದೇಶವಿದ್ದು, ಅನಧಿಕೃತ ಮರಳು ಸಾಗಾಣಿಕೆಯನ್ನು ನಿಯಂತ್ರಿಸಲು ಹಾಗೂ ಅಧಿಕೃತವಾಗಿ ಮರಳು ಗಣಿಗಾರಿಕೆ ಅವಕಾಶ ನೀಡುವ ಸಭೆಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ, ಅದೇ ರೀತಿ 7 ಜನರ ತಂಡದ ಸಮಿತಿಯಿಂದ ಕಾಲಕಾಲಕ್ಕೆ ನಿಯಮಿತವಾಗಿ ಸಭೆಯನ್ನು ನಡೆಸಲಾಗುತ್ತಿದೆ, ಕರಾವಳಿ ನಿಯಂತ್ರಣ ವಲಯದಡಿ ಪಾರಂಪಾರಿಕವಾಗಿ ನಡೆದು ಬಂದ ಸಾಂಪ್ರಾದಾಯಿಕ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕನಿಜ ನಿಧಿಯಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಕೋರಿ ಪ್ರಸ್ತಾವನೆಯೊಂದನ್ನು ಸಲ್ಲಿಸುವಂತೆ ಡಾ. ರಾಮ್ ಪ್ರಸಾತ್ ಅವರು ತಿಳಿಸಿದರು.
ರಾಜ್ಯದ ವಿವಿದೆಡೆಯಿಂದ ಬರುವ ಅದಿರು ಮಂಗಳೂರಿನ ಬಂದರಿನಿಂದಲೇ ತೆರಳುವ ಕಾರಣ ಟ್ರಕ್ಗಳ ನಿರಂತರ ಓಡಾಟದಿಂದ ರಸ್ತೆಗಳು ಹಾನಿಗೀಡಾಗುತ್ತವೆ, ಆ ರಸ್ತೆಗಳನ್ನು ದುರಸ್ತಿ ಪಡಿಸಲು ಜಿಲ್ಲಾ ಖನಿಜ ನಿಧಿಯಿಂದ ಹೆಚ್ಚಿನ ಪಾಲು ನೀಡುವಂತೆ ಶಾಸಕರು ಸಭೆಯ ಗಮನಕ್ಕೆ ತಂದ ಸಂದರ್ಭದಲ್ಲಿ ಡ. ರಾಮ್ ಪ್ರಸಾತ್ ಅವರು ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಅಕ್ರಮ ಮರಳುಗಾರಿಕೆ ಗಣಿಗಾರಿಕೆಗೆ ಕಡಿವಾಣ ಹಾಕಲಾಗುತ್ತಿದೆ, ನಿಸರ್ಗದ ಉಳಿವು ಹಾಗೂ ಮುಂದಿನ ಪೀಳಿಗೆಗೆ ಸಂಪನ್ಮೂಲಗಳು ದೊರೆಯಬೇಕಾದ ಹಿನ್ನಲೆಯಲ್ಲಿ ಇಲಾಖೆಯಿಂದ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದೂ ಅವರು ತಿಳಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಇಲಾಖೆಯ ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಸಲು ಹಾಗೂ ಅರ್ಜಿ ಸಲ್ಲಿಕೆ ವಿಧಾನಗಳನ್ನು ಸರಳೀಕರಣಗೊಳಿಸಲಾಗುತ್ತಿದೆ, ಉಳಿದಂತೆ ಸಿಸಿಟಿವಿಗಳನ್ನು ಕೂಡ ಅಳವಡಿಸಲಾಗುವುದು ಎಂದು ತಿಳಿಸಿದರು.
ಅದ್ಯಾಪಾಡಿ ಹಾಗೂ ಶಂಬೂರು ಡ್ಯಾಂಗಳಲ್ಲಿನ ಹೂಳನ್ನು ತೆಗೆಯಲು ಈಗಾಗಲೇ ಕಾರ್ಯಾದೇಶ ನೀಡಲಾಗಿದ ಅದರಂತೆ ತುಂಬೆ ಡ್ಯಾಂನ 15.3 ಮೆಟ್ರಿಕ್ ಟನ್ ಹೂಳು ತೆಗೆಯುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ಟೆಂಡರ್ ಕರೆಯಲಾಗಿದೆ ಎಂದು ಖನಿಜಾ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಾದ ಕಾವೇರಿ ಅವರು ಸಭೆಗೆ ಮಾಹಿತಿ ನೀಡಿದರು.