ಕೃಷಿ, ಉದ್ಯಮ, ಪ್ರವಾಸೋದ್ಯಮ, ಸಂಸ್ಕೃತಿ ಸ್ನೇಹಿ ಜಿಲ್ಲೆಯಾಗಿ ದ.ಕ. ಅಭಿವೃದ್ಧಿ

 ಕೃಷಿ, ಉದ್ಯಮ, ಪ್ರವಾಸೋದ್ಯಮ, ಸಂಸ್ಕೃತಿ ಸ್ನೇಹಿ ಜಿಲ್ಲೆಯಾಗಿ ದ.ಕ. ಅಭಿವೃದ್ಧಿ
Share this post


ಮಂಗಳೂರು, ಜ.26, 2022: ಕೃಷಿ, ಉದ್ಯಮ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸ್ನೇಹಿ ಜಿಲ್ಲೆಯನ್ನಾಗಿ ದಕ್ಷಿಣ ಕನ್ನಡವನ್ನು ವಿಶಿಷ್ಟ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲೆಗೆ ನೂತವಾಗಿ  ಉಸ್ತುವಾರಿ ವಹಿಸಿಕೊಂಡಿರುವ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಭರವಸೆ ನೀಡಿದರು.

ಅವರು ಬುಧವಾರ ನಗರದ ನೆಹರೂ ಮೈದಾನದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.

ಕೃಷಿ ಸ್ನೇಹಿ, ಉದ್ಯಮ ಸ್ನೇಹಿ, ಪ್ರವಾಸೋದ್ಯಮ ಸ್ನೇಹಿ ಹಾಗೂ ಸಂಸ್ಕೃತಿ ಸ್ನೇಹಿ ಎಂಬ ನಾಲ್ಕು ಸೂತ್ರಗಳನ್ನಿಟ್ಟುಕೊಂಡು ಆಯಾ ಕ್ಷೇತ್ರಗಳಲ್ಲಿ ವಿಶಿಷ್ಟ ರೀತಿಯಲ್ಲಿ ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ಆ ಹೊಣೆಗಾರಿಕೆ ನನ್ನ ಮೇಲಿದೆ. ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡ ಎಲ್ಲಾ ಕ್ಷೇತ್ರಗಳಲ್ಲಿಯೂ ದಾಪುಗಾಲಿಡುತ್ತಿದ್ದು, ಸಾಕಷ್ಟು ಅಭಿವೃದ್ದಿ ಪ್ರಕ್ರಿಯೆಗಳಲ್ಲಿ ಪ್ರಗತಿಯನ್ನು ಕಾಣುತ್ತಿದೆ ಎಂದು ಹೇಳಿದರು.

ಕಳೆದ 20 ವರ್ಷಗಳಿಂದ ಜೀವಂತವಾಗಿರುವ ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ಬದ್ದವಾಗಿದೆ, ಅದಕ್ಕಾಗಿ ಕಂದಾಯ ಹಾಗೂ ಅರಣ್ಯ ಇಲಾಖೆಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ,  ಜಿಲ್ಲೆಯಲ್ಲಿ ಗುರುತಿಸಲಾಗಿರುವ 66,428 ಹೆಕ್ಟೇರ್‍ಗೂ ಹೆಚ್ಚಿನ ಡೀಮ್ಡ್ ಫಾರೆಸ್ಟ್ ಭೂಮಿಯಲ್ಲಿ 34,000 ಹೆಕ್ಟೇರ್ ಭೂಮಿ ಕೈಬಿಡಲು ಸರ್ಕಾರವು ನಿರ್ಧರಿಸಿದೆ ಎಂದರು.

ಜಿಲ್ಲೆಯಲ್ಲಿ ಅಡಿಕೆ, ತೆಂಗು, ಭತ್ತದ ಪ್ರದೇಶ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಿದೆ, ಶೇ.97 ರೈತರು 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ, ಕೃಷಿ ಕ್ಷೇತ್ರದ ವಿಸ್ತರಣೆ ಮಾಡಲಾಗುವದು. ರೈತರ ಆದಾಯ ದ್ವಿಗುಣಗೊಳಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವದು ಎಂದು ನುಡಿದರು.

ಅಮೃತ ಯೋಜನೆಯಡಿ 194.90 ಕೋಟಿ ರೂ.ಗಳ ಮೊತ್ತದಲ್ಲಿ ವಿವಿಧ ಯೋಜನೆಗಳನ್ನು ತೆಗೆದುಕೊಂಡಿದ್ದು ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುತ್ತಿದೆ, ಜಿಲ್ಲೆಗೊಂದು ಗೋಶಾಲೆ ತೆರೆಯುವ ನಿಟ್ಟಿನಲ್ಲಿ ಈಗಾಗಲೇ ಕಡಬ ತಾಲೂಕು ರಾಮಕುಂಜದಲ್ಲಿ 98 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ ರೂ. 33 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ. ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭಿಮಾಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭಿಮಾಯೋಜನೆಯಾಡಿ 7 ಲಕ್ಷ ಖಾತೆದಾರರನ್ನು ವಿಮಾ ವ್ಯಾಪ್ತಿಗೆ ನೊಂದಣಿ ಮಾಡಲಾಗಿರುತ್ತದೆ ಎಂದರು.  

ಸಾಮಾನ್ಯ ಶಿಕ್ಷಕನ ಮಗ ಇಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಆಗಲು ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ಕಾರಣ. ಸಂವಿಧಾನವನ್ನು ಗಟ್ಟಿ ಗೊಳಿಸುವ ನಡವಳಿಕೆ, ಚಟುವಟಿಕೆ ಇಂದಿನ ಅನಿವಾರ್ಯ.  ತುರ್ತು ಪರಿಸ್ಥಿತಿ, ಭಯೋತ್ಪಾದನೆ, ನಕ್ಸಲ್ ಚಟುವಟಿಕೆ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದರೂ ಅದನ್ನು ಯಶಸ್ವಿಯಾಗಿ ಹತ್ತಿಕ್ಕುವ ಮೂಲಕ ಸಂವಿಧಾನವೇ ಶ್ರೇಷ್ಠ ಅನ್ನುವುದನ್ನು ಸಾಬೀತು ಪಡಿಸಲಾಗುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಕೆ.ಎಸ್.ಆರ್.ಟಿ.ಸಿ ಚಾಲಕರಿಗೆ ಸನ್ಮಾನ:

ಇದೇ ಸಂದರ್ಭದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ 2016 ಮತ್ತು 2017ನೇ, 2017-18 ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದ ಚಾಲನಾ ಸಿಬ್ಬಂದಿಗಳಿಗೆ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಹಾಗೂ ಜನಪ್ರತಿನಿಧಿಗಳು ನೀಡಿ ಗೌರವಿಸಿದರು.

ಪ್ರಶಸ್ತಿ ಪುರಸ್ಕೃತರ ವಿವರ:
ಹರಿಶ್ಚಂದ್ರ ಕೆ ಪುತ್ತೂರು, ಎಸ್ ಉಮೇಶ್ ಧರ್ಮಸ್ಥಳ, ಪ್ರವೀಣ ಸಾಲಿಯಾನ್, ಎಚ್.ಪಿ ರಾಜು ಧರ್ಮಸ್ಥಳ, ವಸಂತ ಬಂಗೇರ ಧರ್ಮಸ್ಥಳ, ಬಿ. ಕೇಶವ ಪುತ್ತೂರು, ನಂದಕುಮಾರ್ ಪುತ್ತೂರು, ಟಿ. .ಯು ಸತೀಶ ಮಡಿಕೇರಿ, ಕೆ.ಪಿ ಮಹಮ್ಮದ್ ಸುಳ್ಯ, ಎಲ್ ಗೋಪಾಲ ಕೃಷ್ಣ ಮಡಿಕೇರಿ ಹಾಗೂ ಪಿ.ಎ. ಶಿವರಾಮ್ ಸುಳ್ಯ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!