ಐಡಿಯಲ್ ಐಸ್ ಕ್ರೀಂ ಸಂಸ್ಥಾಪಕ ಎಸ್. ಪ್ರಭಾಕರ್ ಕಾಮತ್ ನಿಧನ

 ಐಡಿಯಲ್ ಐಸ್ ಕ್ರೀಂ  ಸಂಸ್ಥಾಪಕ ಎಸ್. ಪ್ರಭಾಕರ್ ಕಾಮತ್ ನಿಧನ
Share this post

ಮಂಗಳೂರು, ನ. 6, 2021: ಮಂಗಳೂರಿನ ಐಡಿಯಲ್ ಐಸ್ ಕ್ರೀಂ ಸಂಸ್ಥೆಯ ಸಂಸ್ಥಾಪಕರಾದ ಎಸ್. ಪ್ರಭಾಕರ್ ಕಾಮತ್ (79 ವ) ಶನಿವಾರ (06.11.2021) ಬೆಳಗ್ಗಿನ ಜಾವ 3.30 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಎಸ್. ಪ್ರಭಾಕರ್ ಕಾಮತ್‍ರವರ ಜೀವನ ಪಯಣ:
ಮಂಗಳೂರಿನಲ್ಲಿ ಟೈಲರಿಂಗ್ ವಸ್ತುಗಳ ವಿತರಣೆ, ಪಟಾಕಿ ವಿತರಣೆಯಂತಹ ಉದ್ಯಮವನ್ನು ಆರಂಭಿಸಿದ ಪ್ರಭಾಕರ ಕಾಮತ್ ಅವರು, ಮುಂದೆ ವರ್ಷಪೂರ್ತಿ ಬೇಡಿಕೆಯಿರುವ ಉದ್ಯಮ ಪ್ರಾರಂಭಿಸಲು ಪಣ ತೊಟ್ಟರು. ಅದರಂತೆ 1975ರಲ್ಲಿ ಐಡಿಯಲ್ ಕ್ರೀಮ್ ಪಾರ್ಲರ್ ಆರಂಭಿಸಿ ಸ್ವತಃ ಅವರೇ ಮನೆಯಲ್ಲಿ ಸ್ವಂತ ಪ್ರಯೋಗ ನಡೆಸಿ ವಿವಿಧ ನಮೂನೆಯ ಐಸ್ ಕ್ರೀಂಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮನೆಮಾತಾದರು.

ಐಡಿಯಲ್ ಸಂಸ್ಥೆ ಇಂದು ಮಾರುಕಟ್ಟೆಯಲ್ಲಿ ಜನಪ್ರಿಯ ಐಸ್ ಕ್ರೀಂ ಸಂಸ್ಥೆಯಾಗಿ ಬೆಳೆದಿದೆ. ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಸಹ ಪಡಕೊಂಡಿದೆ. ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್‍ನಲ್ಲಿ ಕಳೆದ ಎರಡು ದಶಕಗಳಲ್ಲಿ ವಿವಿಧ ರೀತಿಯ ಐಸ್ ಕ್ರೀಂಗಳನ್ನು ತಯಾರಿಸುತ್ತಿದ್ದು, ಅದರಲ್ಲಿ ಪಾರದರ್ಶಕ ಗಾಜಿನಲ್ಲಿ ನೀಡಲಾಗುತ್ತಿದ್ದ “ಗಡ್‍ಬಡ್” ಹೆಸರಿನ ಐಸ್ ಕ್ರೀಂ ಬಹಳ ಜನಪ್ರಿಯವಾಗಿದೆ. ಇದನ್ನು ದೇಶ ವಿದೇಶದಿಂದ ಬರುತ್ತಿದ್ದ ಜನರು ಇಂದಿಗೂ ಸವಿಯುತ್ತಿದ್ದಾರೆ. ಐಡಿಯಲ್‍ನ “ಗಡ್‍ಬಡ್” ಐಸ್ ಕ್ರೀಂ ಮಂಗಳೂರಿನ ಒಂದು ಹೆಗ್ಗುರುತಾಗಿ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದೆ.

ಪ್ರಭಾಕರ ಕಾಮತ್‍ರವರು ಹಲವಾರು ಜನರಿಗೆ ಉದ್ಯೋಗ ನೀಡಿ ಆ ಕುಟುಂಬಗಳಿಗೆ ಶ್ರೇಯೋದಾತರಾಗಿದ್ದರು. ಜನ ಸಾಮಾನ್ಯರ ಬಾಯಿಯಲ್ಲಿ “ಪಬ್ಬಾ ಮಾಮ್” ಎಂದೇ ಜನಜನಿತರಾಗಿ ಕೊಡುಗೈದಾನಿಯಾಗಿದ್ದರು.

2015ರಲ್ಲಿ ಇವರ ಸಮಾಜ ಸೇವೆಯನ್ನು ಗುರುತಿಸಿ ಶ್ರೀ ಗೋಕರ್ಣ ಮಠದ ಹಿರಿಯ ಸ್ವಾಮೀಜಿಯವರು `ಜೀವೋತ್ತಮ ಪ್ರಶಸ್ತಿ’ ನೀಡಿ ಗೌರವಿಸಿದ್ದರು. 2016ರ ಶ್ರೀ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರ ಸುವರ್ಣ ಚಾತುರ್ಮಾಸ ವೃತವನ್ನು ಮಂಗಳೂರಿನಲ್ಲಿ ಶ್ರೀಯುತರ ಮುಂದಾಳತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಗಿತ್ತು. 2019ರಲ್ಲಿ ಶ್ರೀ ಬದರಿನಾಥ ಶಾಖಾ ಮಠದಲ್ಲಿ ನೆರವೇರಿಸಿದ ಚಾತುರ್ಮಾಸ ವೃತದ ಸಂದರ್ಭದಲ್ಲಿ 2 ತಿಂಗಳ ಕಾಲ ಶ್ರೀಯುತರು ಸ್ವಾಮೀಜಿಗಳ ಸೇವಕರಾಗಿ ಸ್ವಾಮಿ ನಿಷ್ಠರಾಗಿದ್ದರು. ಇದು ಅವರ ಸರಳ ವ್ಯಕ್ತಿತ್ವದ ಪ್ರತೀಕವಾಗಿತ್ತು.

ಅಂತಿಮ ದರ್ಶನವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ್ ಕಾಮತ್, ಯು.ಟಿ. ಖಾದರ್, ಭರತ್ ವೈ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಶಾಸಕ ಜೆ.ಆರ್. ಲೋಬೊ, ಕಾರ್ಪೋರೇಟರ್‍ಗಳಾದ ಸುಧೀರ್ ಕಣ್ಣೂರು, ಶಶಿಧರ್ ಹೆಗ್ಡೆ, ಜಗದೀಶ್ ಶೆಟ್ಟಿ, ಭಾರತ್ ಬೀಡಿ ಸಂಸ್ಥೆಯ ಸುಧೀರ್ ಪೈ, ಹ್ಯಾಂಗ್ಯೋ ಎಂಡಿ ಪ್ರದೀಪ್ ಜಿ. ಪೈ, ತರ್ಜನಿ ಕಮ್ಯನಿಕೇಶನ್ ಪ್ರೈ. ಲಿ.ನ ಎಂಡಿ ಸಂಜಯ್ ಪ್ರಭು, ಮೋತಿಶ್ಯಾಂನ ಅರ್ಷದ್, ಧರ್ಮರಾಜ್, ಸಾಹುದ್, ಪೈ ಸೇಲ್ಸ್‍ನ ಟಿ. ಗಣಪತಿ ಪೈ, ಡಿವಿಕೆ ಸಮೂಹದ ಡಿ. ವಾಸುದೇವ ಕಾಮತ್, ಆರ್ಕಿಟೆಕ್ಟ್ ವೆಂಕಟೇಶ್ ಪೈ, ಅರುಣಾ ಇಂಡಸ್ಟ್ರೀಸ್‍ನ ಅನಂತೇಶ್ ಪ್ರಭು, ಪ್ರದೀಪ ಕುಮಾರ್ ಕಲ್ಕೂರ, ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ ಭಗವಾನ್ ಸೋನೆವಾನೆ ಪಡೆದರು. ಕರ್ನಾಟಕ ರಾಜ್ಯ ಸಚಿವರಾದ ಡಾ. ಸಿ.ಎನ್. ಅಶ್ವಥ್ ನಾರಾಯಣ, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರಾದ ಆರ್. ವಿ. ದೇಶ್‍ಪಾಂಡೆ, ಬಿ. ರಮಾನಾಥ್ ರೈ, ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್, ವಿಆರ್‍ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ್ ಸಂಕೇಶ್ವರ್, ಡಾ. ಮೋಹನ್ ಆಳ್ವ, ಸಂಧ್ಯಾ ಪೈ, ಹರಿಕೃಷ್ಣ ಪುನರೂರು ಮುಂತಾದ ಗಣ್ಯರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮಂಗಳೂರು, ಉಡುಪಿ ಮತ್ತು ಕರಾವಳಿ ಕರ್ನಾಟಕ, ವಿದೇಶ ಸಹಿತ, ಇತರ ಅನೇಕ ಭಾಗಗಳ ಜನರು ಪ್ರಭಾಕರ್ ಕಾಮತ್ ನಿಧನಕ್ಕೆ ಕಂಬನಿ ಮಿಡಿದು ಶ್ರದ್ಧಾಂಜಲಿ ಸಲ್ಲಿಸಿದರು.

Subscribe to our newsletter!

Other related posts

error: Content is protected !!