ನ್ಯುಮೊಕೋಕಲ್ ಲಸಿಕೆ ಹಾಕಿಸಿ: ಡಾ.ನವೀನ್ ಭಟ್

 ನ್ಯುಮೊಕೋಕಲ್ ಲಸಿಕೆ ಹಾಕಿಸಿ: ಡಾ.ನವೀನ್ ಭಟ್
Share this post

ಉಡುಪಿ, ನ 04, 2021: ದೇಶದಲ್ಲಿ ನ್ಯುಮೋನಿಯಾದಿಂದ ಸಂಭವಿಸುವ ಸಾವುಗಳಲ್ಲಿ 5 ವರ್ಷದೊಳಗಿನ ಮಕ್ಕಳ ಪ್ರಮಾಣ 15% ಇದೆ ಎಂದು ವರದಿಗಳಿದ್ದು, ಮಕ್ಕಳನ್ನು ನ್ಯುಮೋನಿಯಾದಿಂದ ರಕ್ಷಿಸಲು ಪೋಷಕರು ತಪ್ಪದೇ ಮಕ್ಕಳಿಗೆ ನ್ಯುಮೊಕೋಕಲ್ ಲಸಿಕೆಯನ್ನು ಕೊಡಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಹೇಳಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ವತಿಯಿಂದ, ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ  ತಾಯಿ ಮಕ್ಕಳ ಆಸ್ಪತ್ರೆಯಲ್ಲಿ, ಜಿಲ್ಲೆಯಲ್ಲಿ ನ್ಯುಮೊಕೋಕಲ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಿಗೆ ನ್ಯುಮೋನಿಯಾದಿಂದ ರಕ್ಷಣೆ ನೀಡುವ ನ್ಯುಮೊಕೋಕಲ್ ಲಸಿಕೆಯನ್ನು ಪ್ರಸ್ತುತ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಪ್ರಾರಂಭಿಸಲಾಗಿದ್ದು, ಮಕ್ಕಳು ಹುಟ್ಟಿದ ಮೊದಲನೇ ವರ್ಷದಲ್ಲಿ ಗಂಭೀರ ನ್ಯುಮೊಕೋಕಲ್ ಕಾಯಿಲೆ ಉಂಟಾಗುವ ಸಾಧ್ಯತೆಗಳು ಅಧಿಕವಾಗಿದ್ದು, ಈ ಲಸಿಕೆಯನ್ನು 1.5 ತಿಂಗಳು, 3.5 ತಿಂಗಳು ಮತ್ತು 9 ನೇ ತಿಂಗಳಲ್ಲಿ ಒಟ್ಟು  3 ಡೋಸ್ ಗಳಲ್ಲಿ  ನೀಡಲಾಗುವುದು. 

ಈ ಲಸಿಕೆಯು ಮುಂಚೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದ್ದು, ಪ್ರಸ್ತುತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ  ಉಚಿತವಾಗಿ ನೀಡಲಾಗುತ್ತಿದ್ದು,  ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ಕೊಡಿಸುವ ಮೂಲಕ  ಮಕ್ಕಳನ್ನು ನ್ಯುಮೋನಿಯಾ ಮುಕ್ತ ಮಾಡಲು ಸರ್ಕಾರದೊಂದಿಗೆ ಕೈ ಜೋಡಿಸುವಂತೆ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ನ್ಯುಮೋನಿಯಾದಿಂದ ರಕ್ಷಣೆ ನೀಡುವ ನ್ಯುಮೊಕೋಕಲ್ ಲಸಿಕೆ ನೀಡುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲವಾಗಿದ್ದು, ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ಕೊಡಿಸಬೇಕು, ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲಿ 1150 ಮಕ್ಕಳಿಗೆ ನ್ಯುಮೊಕೋಕಲ್ ಲಸಿಕೆ  ನೀಡುವ ಗುರಿ ಹೊಂದಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞರಾದ ಡಾ. ಸ್ವರ್ಣಲತಾ, ಡಾ. ಗುರುಪ್ರಸಾದ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಡಾ. ರಾಮರಾವ್ , ರೋಟರಿಯ ಐ.ಕೆ . ಜಯಚಂದ್ರ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಎಂ.ಜಿ.ರಾಮ ಸ್ವಾಗತಿಸಿದರು, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ವಂದಿಸಿದರು.

Subscribe to our newsletter!

Other related posts

error: Content is protected !!