ಮಂಗಳೂರು: 2ನೇ ಡೋಸ್‍ ಲಸಿಕೆಗೆ ಪ್ರಾಮುಖ್ಯತೆ ನೀಡಲು ಜಿಲ್ಲಾಧಿಕಾರಿ ಸೂಚನೆ

 ಮಂಗಳೂರು: 2ನೇ ಡೋಸ್‍ ಲಸಿಕೆಗೆ ಪ್ರಾಮುಖ್ಯತೆ ನೀಡಲು ಜಿಲ್ಲಾಧಿಕಾರಿ ಸೂಚನೆ
Share this post

ಮಂಗಳೂರು, ಅ 21, 2021: ದೇಶದಲ್ಲಿ ಕೋವಿಡ್ ಸೋಂಕಿನ 100 ಕೋಟಿ ಲಸಿಕೆ ಪೂರ್ಣಗೊಂಡ ಹಿನ್ನಲೆಯಲ್ಲಿ ಇದೇ ಶಕ್ರವಾರ ಜಿಲ್ಲೆಯಲ್ಲಿ ಆಯೋಜಿಸಲಾಗಿರುವ ಲಸಿಕಾ ಮೇಳದಲ್ಲಿ 2ನೇ ಡೋಸ್‍ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಜಿಲ್ಲಾ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅವರು ಗುರುವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಹಾಲ್‍ನಲ್ಲಿ ಕೋವಿಡ್-19 ಲಸಿಕಾ ಪ್ರಗತಿಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿದರು.

ಅ.22 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಕೋವಿಡ್‍ನ ಒಟ್ಟು 1,20,000 ಲಸಿಕಾಕರಣ ಗುರಿ ನೀಡಲಾಗಿದೆ, ಎರಡನೇ ಡೋಸ್ ಪಡೆಯುವವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು, 18 ವರ್ಷಕ್ಕಿಂತ ಮೇಲ್ಪಟ್ಟಿರುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಲಸಿಕೆ ನೀಡುವ ಮೂಲಕ ಈ ಲಸಿಕಾ ಮೇಳವನ್ನು ಯಶಸ್ವಿಯಾಗಿಸಬೇಕು ಎಂದು ಅವರು ಸೂಚಿಸಿದರು.

ಮಂಗಳೂರಿಗೆ 65,000 ರಿಂದ 67,000, ಬಂಟ್ವಾಳ ತಾಲೂಕಿಗೆ 15,000, ಬೆಳ್ತಂಗಡಿ ತಾಲೂಕಿಗೆ 18,000 ಪುತ್ತೂರು ತಾಲೂಕಿಗೆ 14,000, ಸುಳ್ಯ ತಾಲೂಕಿಗೆ 6,000 ದಂತೆ ಲಸಿಕಾ ಮೇಳದ ಗುರಿ ನಿಗದಿಪಡಿಸಲಾಗಿದೆ,

ಕೋವಿಡ್ ಸಂಭಾವ್ಯ ಮೂರನೇ ಅಲೆಯ ಮುನ್ನೆಚ್ಚರಿಕೆಯ ಸಲುವಾಗಿ ಹೆಚ್ಚಿನ ಕೋವಿಡ್ ತಪಾಸಣೆ ಕೈಗೊಳ್ಳಬೇಕು ಎಂದ ಅವರು ಪ್ರತಿಯೊಬ್ಬರೂ ಕೋವಿಡ್ ನಿಯಮಗಳನ್ನು ಪಾಲಿಸುತ್ತಿರುವ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಅಂಗನವಾಡಿ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಪ್ರತೀ ಮನೆ-ಮನೆಗೆ ಭೇಟಿ ನೀಡಿ ಕೋವಿಡ್‍ನ ಮೊದಲ ಡೋಸ್ ಲಸಿಕೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು 2ನೇ ಲಸಿಕೆ ಪಡೆಯದವರಿಗೆ ಕೂಡಲೇ ಲಸಿಕೆ ಪಡೆಯುವ ಕುರಿತು ಜಾಗೃತಿ ಮೂಡಿಸಬೇಕು, ವಿದ್ಯಾರ್ಥಿಗಳ ಪೋಷಕರು ಲಸಿಕೆ ಪಡೆದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಆರೋಗ್ಯಾಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲೆಯಲ್ಲಿ 2ನೇ ಡೋಸ್ ಲಸಿಕೆ ಪಡೆಯಲು ಬಾಕಿ ಉಳಿದುಕೊಂಡಿರುವವರ ಪಟ್ಟಿ ಮಾಡಬೇಕು ಹಾಗೂ ಕಾಲ್ ಸೆಂಟರ್ ನಿಂದ ಅವರಿಗೆ ದೂರವಾಣಿ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಬೇಖು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸದಾಶಿವ ಶ್ಯಾನುಬೋಗ್, ವಿವಿಧ ತಾಲೂಕಿನ ಆರೋಗ್ಯ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿದ್ದರು

Subscribe to our newsletter!

Other related posts

error: Content is protected !!