ಯಾ ದೇವೀ ಸರ್ವಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ…
ಲಲಿತಾ ಪಂಚಮಿಯಂದು ಆರಾಧಿಸಲ್ಪಡುವ ಸ್ಕಂದಮಾತಾ
ನವರಾತ್ರಿ 5 ನೇ ದಿನ: ಸ್ಕಂದಮಾತಾ
ಲಲಿತಾ ಪಂಚಮಿಯಂದು ಆರಾಧಿಸಲ್ಪಡುವ ದುರ್ಗಾ ರೂಪ ಸ್ಕಂದಮಾತಾ ಅಥವಾ ಲಲಿತಾಂಬಿಕೆ. ಈಕೆ ಮಾತೃವಾತ್ಸಲ್ಯದ ಖನಿಯಾಗಿ ಮಕ್ಕಳನ್ನು ಒಬ್ಬ ತಾಯಿಯು ಯಾವ ರೀತಿ ಪೊರೆಯುತ್ತಾಳೋ ಹಾಗೆ ಕಾಲಕಾಲದ ಅಗತ್ಯವನ್ನು ಅರಿತು ಪ್ರೀತಿಯಿಂದ ಮಮತೆ ವಾತ್ಸಲ್ಯದಿಂದ ಅವರ ಆಶಯಗಳನ್ನು ಪೂರೈಸುವ ಮಹಾತಾಯಿಯಾಗಿದ್ದಾಳೆ ಈ ಸ್ಕಂದ ಮಾತೆ.
ಅಂಬಿಕೆಗೆ ಬಿಳಿ ಹಾಗೂ ಕೇಸರಿ ಬಣ್ಣದ ಸೀರೆ ಮೆಚ್ಚು. ಹಾಗಾಗಿ ಆಕೆಗೆ ಕೇಸರಿ ಬಣ್ಣದ ಸೀರೆ ತೊಡಿಸಿ ಹಳದಿ, ಕೇಸರಿ ಬಣ್ಣದ ಹೂವು, ಗುಲಾಬಿ, ನಾಗಸಂಪಿಗೆ, ಕೇದಿಗೆ, ಸೇವಂತಿಗೆ ಇತ್ಯಾದಿ ವಿವಿಧ ಬಣ್ಣದ ಹೂವುಗಳಿಂದ ಅರ್ಚಿಸಿದರೆ ಆಕೆ ಸಂತೋಷಗೊಳ್ಳುತ್ತಾಳೆ. ಆಕೆಗೆ ನೈವೇದ್ಯ, ಫಲವಸ್ತು, ತಾಂಬೂಲಗಳ ಜೊತೆ ರಸಾಯನವನ್ನು ಸಮರ್ಪಿಸಿದರೆ ಬಹಳ ಉತ್ತಮ.
ಕನ್ನಿಕೆಗೆ ವಸ್ತ್ರ ಸುಮಂಗಲಿಯರಿಗೆ ಭಾಗಿನ ಕೊಟ್ಟರೆ ಒಳ್ಳೆಯದು. ಬುಧಗ್ರಹದ ಅಧಿಪತ್ಯವನ್ನು ಹೊಂದಿದ ಈ ಮಾತೆ ಚತುರ್ಭುಜೆಯಾಗಿದ್ದು ತನ್ನೆರಡು ಕೈ ಗಳಲ್ಲಿ ಕಮಲವನ್ನು ಹಿಡಿದು ಇನ್ನೆರಡು ಕೈಗಳಲ್ಲಿ ಮಗು ಸ್ಕಂದನನ್ನು ಮತ್ತು ಅಭಯ ಮುದ್ರೆಯನ್ನು ಹೊಂದಿದ್ದಾಳೆ. ತಾರಕಾಸುರನೆಂಬ ರಾಕ್ಷಸ ಸಂಹಾರ ಶಿವ ಪಾರ್ವತಿಯರ ಪುತ್ರನಿಂದಾಗಬೇಕಿತ್ತು. ಹಾಗಾಗಿ ಶಿವ ಪಾರ್ವತಿಯರ ಪ್ರೇಮ ಸ್ವರೂಪ ಸ್ಕಂದನ ಜನನವಾಗುತ್ತದೆ. ಆ ಮಗು ಷಣ್ಮುಖನನ್ನು ತೊಡೆಯಲ್ಲಿ ಕೂರಿಸಿಕೊಂಡ ದಿವ್ಯ ರೂಪವೇ ಸ್ಕಂದಮಾತಾ ರೂಪ.
“ಸಿಂಹಾಸನ ಗತಾ ನಿತ್ಯಂ ಪದ್ಮಾಶ್ರಿತ ಕರದ್ವಯಾ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ “
ಎಂಬ ಶ್ಲೋಕದಿಂದ ಆಕೆಯನ್ನು ಪೂಜಿಸಿದರೆ ಸದಾ ಶುಭವನ್ನು ಆಕೆ ನೀಡಿ ಹರಸುತ್ತಾಳೆ.