ಯಾ ದೇವೀ ಸರ್ವಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ…
ಚತುರ್ಭುಜೇ ಚಂದ್ರಕಳಾವತಂಸೇ…
ನವರಾತ್ರಿ 6 ನೇ ದಿನ: ಕಾತ್ಯಾಯಿನೀ
ಇನ್ನು ಶರನ್ನವರಾತ್ರಿಯ ಷಷ್ಟ್ಯ ಮ ದಿನದಂದು ದೇವಿ ಕಾತ್ಯಾಯಿನೀ ದುರ್ಗೆ ಭಕ್ತರಿಂದ ಪೂಜಿಸಲ್ಪಡುತ್ತಾಳೆ. ಖಳ ಮಹಿಷಾಸುರನನ್ನು ಸಂಹರಿಸಲು ಸಿಂಹವಾಹಿನಿಯಾಗಿ ಕಾಣಿಸಿಕೊಂಡ ರುದ್ರರೂಪ ಕಾತ್ಯಾಯಿನೀ ದುರ್ಗಾ. ಆಕೆಯನ್ನು ಭಕ್ತಿ ಶ್ರದ್ಧೆಯಿಂದ ಆರಾಧಿಸುವುದರಿಂದ ಸಕಲ ಕಷ್ಟ, ಭಯ ನಾಶವಾಗಿ ಸುಖ ಸಂತಸದ ಬಾಳನ್ನು ಆಕೆ ನೀಡುತ್ತಾಳೆ.
ಬಂಗಾರ ವರ್ಣದ ಈಕೆಯೂ ಚತುರ್ಭುಜೆಯಾಗಿ ಅಭಯ ಮುದ್ರೆ ಹಾಗೂ ವರಮುದ್ರೆ ಮತ್ತು ಇನ್ನೆರಡು ಕೈಗಳಲ್ಲಿ ಕಮಲದ ಹೂವು ಮತ್ತು ಖಡ್ಗವನ್ನು ಧರಿಸಿದ್ದಾಳೆ. ಈಕೆಗೆ ಕೆಂಪು ಬಣ್ಣದ ಸೀರೆ ಮತ್ತು ರವಕೆ , ಕೆಂಪು ಬಣ್ಣದ ಹೂವು, ಲಲಿತಾ ಸಹಸ್ರನಾಮದ ಪಠನೆ ಮಾಡಿ ಕುಂಕುಮದಿಂದ ಅರ್ಚನೆ ಮಾಡಿದರೆ ಶೀಘ್ರವಾಗಿ ಒಲಿಯುತ್ತಾಳೆ.
ಕಡಲೆ ಬೇಳೆಯ ಪಾಯಸ, ಜೇನುತುಪ್ಪ, ಅನ್ನ ನೈವೇದ್ಯ ಹಾಲು ಪಾಯಸ ಈಕೆಗೆ ಬಹಳ ಪ್ರಿಯವಾದ ಖಾದ್ಯ. ಭಯ, ರೋಗ ಸಂತಾಪಗಳನ್ನು ದೂರ ಮಾಡಿ ತನ್ನ ಪರಮ ಭಕ್ತರಿಗೆ ಧರ್ಮ ಅರ್ಥ ಕಾಮ ಮೋಕ್ಷವನ್ನು ಕರುಣಿಸುತ್ತಾಳಂತೆ ಈ ಶ್ರೀ ಲಲಿತೆ.
ಕೆಂಪು ಬಣ್ಣ ಆರೋಗ್ಯದಾಯಕ, ಧೈರ್ಯ, ಮನಸ್ಸಿಗೆ ಸ್ಥೈರ್ಯ ಜೊತೆಗೆ ಇದು ಪುರುಷತ್ವ ಹಾಗೂ ಸ್ವಾಭಿಮಾನದ ದ್ಯೋತಕ.
” ಚತುರ್ಭುಜೇ ಚಂದ್ರಕಳಾವತಂಸೇ ಕುಚೋನ್ನತೆ ಕುಂಕುಮರಾಗಶೋಣಿ ಪುಂಡ್ರೇಕ್ಷು ಪಾಶಾಂಕುಶ ಪುಷ್ಪಬಾಣಹಸ್ತೇ ನಮಸ್ತೇ ಜಗದೇಕಮಾತಃ
ಎಂಬ ಶ್ಲೋಕದಿಂದ ಆಕೆಯನ್ನು ಪೂಜಿಸಿದರೆ ಬಹಳ ಒಳ್ಳೆಯದು.
ನವರಾತ್ರಿಯಲ್ಲಿ ನವರೂಪದಲ್ಲಿ ದರ್ಶನ ನೀಡುವ ಆ ದುರ್ಗಾ ಪರಮೇಶ್ವರಿ ನಮ್ಮೆಲ್ಲ ಭಕ್ತರ ಕಷ್ಟಗಳನ್ನು ನಿವಾರಿಸಿ ಕೊರೋನಾ ಮಹಾಮಾರಿಯಂತಹ ಕೆಟ್ಟ ಶಕ್ತಿಗಳನ್ನು ಸಂಪೂರ್ಣ ಧಮನ ಮಾಡಿ ಎಲ್ಲರಿಗೂ ಸುಂದರ ಸುಖ ಜೀವನವನ್ನು ನೀಡಿ ಸಲಹಲಿ ಎಂದು ಹಾರೈಸೋಣ.