ಕೋವಿಡ್ ನಿರ್ಬಂಧ ಸಡಲಿಕೆ ಬಗ್ಗೆ ತಜ್ಞರ ಸಮಿತಿ ಸಭೆಯಲ್ಲಿ ತೀರ್ಮಾನ: ಬೊಮ್ಮಾಯಿ

 ಕೋವಿಡ್ ನಿರ್ಬಂಧ ಸಡಲಿಕೆ ಬಗ್ಗೆ ತಜ್ಞರ ಸಮಿತಿ ಸಭೆಯಲ್ಲಿ ತೀರ್ಮಾನ: ಬೊಮ್ಮಾಯಿ
Share this post


ಮಂಗಳೂರು, ಅ,13, 2021: ರಾಜ್ಯದ ಗಡಿ ಭಾಗಗಳಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ದಸರಾ ಮುಗಿದ ಕೂಡಲೇ ಕೋವಿಡ್ ತಜ್ಞರ ಸಮಿತಿಯ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರುಬುಧವಾರ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕೇರಳ ಮತ್ತು ಮಹಾರಾಷ್ಟ್ರ ದಲ್ಲಿ ಇರುವ ಕೋವಿಡ್ ಪರಿಸ್ಥಿತಿ ಬಗ್ಗೆ ತಜ್ಞರು ಮೌಲ್ಯಮಾಪನ ಮಾಡುತ್ತಿದ್ದಾರೆ. ದಸರಾ ಹಬ್ಬದ ಬಳಿಕ ಕೋವಿಡ್ ತಜ್ಞರ ಸಭೆ ಕರೆಯಲಾಗುವುದು. ಗಡಿ ಜಿಲ್ಲೆಗಳಲ್ಲಿ ಈಗಿರುವ ನಿಬರ್ಂಧಗಳನ್ನು ಸಡಿಲಮಾಡುವ ಕುರಿತು ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ಸಂಬಂಧವೂ ತಜ್ಞರ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆ ಪ್ರಕರಣಗಳನ್ನು ದಾಖಲಿಸಿ, ಚಾರ್ಜ್ ಶೀಟ್ ಹಾಕಲಾಗಿರುವ ಬಗ್ಗೆ ಸುದ್ದಿಗಾರರು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ, ಪೊಲೀಸ್ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

ಸಮಾಜದಲ್ಲಿ ಜನರ ಭಾವನೆಗಳಿಗೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕಾಗುತ್ತದೆ. ಪರಸ್ಪರರ ಭಾವನೆಗಳಿಗೆ ಧಕ್ಕೆ ಉಂಟಾದಾಗ ಸಹಜವಾಗಿ ಕ್ರಿಯೆ- ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ. ಸಾಮಾಜಿಕವಾಗಿ ಸಾಮರಸ್ಯವನ್ನು ಕಾಪಾಡಲು ನಾವೆಲ್ಲರೂ ಪ್ರಯತ್ನ ಪಡಬೇಕು. ನೈತಿಕತೆ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಪ್ರತಿಯೊಬ್ಬರದ್ದು ಹೊಣೆಗಾರಿಕೆ ಇದೆ ಎಂದು ಸಿಎಂ ನೈತಿಕ ಪೊಲೀಸ್ ಗಿರಿ ಬಗ್ಗೆ ಪ್ರತಿಕ್ರಿಯಿಸಿದರು.

ಕನ್ನಡ ಮತ್ತು ಸಂಸ್ಕøತಿ ಹಾಗೂ ಇಂಧನ ಇಲಾಖೆ ಸಚಿವರಾದ ವಿ. ಸುನೀಲ್ ಕುಮಾರ್, ಶಾಸಕರಾದ ಡಾ. ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್, ಮೇಯರ್ ಪ್ರೇಮಾನಂದ ಶೆಟ್ಟಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ., ಪೊಲೀಸ್ ಆಯುಕ್ತ ಶಶಿಕುಮಾರ್, ಗಣ್ಯರು, ಅಧಿಕಾರಿಗಳು ಇದ್ದರು.

Subscribe to our newsletter!

Other related posts

error: Content is protected !!