ಕೃಷಿ ಪ್ರದೇಶದ ವಿಸ್ತರಣೆ ಆಗಬೇಕು: ಸುನಿಲ್ ಕುಮಾರ್
ಉಡುಪಿ, ಅ 08, 2021: ಇತ್ತೀಚಿನ ದಿನಗಳಲ್ಲಿ ಜನತೆಗೆ ಕೃಷಿ ಕ್ಷೇತ್ರದ ಮೇಲೆ ಆಸಕ್ತಿ ಹೆಚ್ಚಾಗುತ್ತಿದ್ದು,ಇದು ಒಳ್ಳೆಯ ಬೆಳವಣಿಗೆ. ಇದರೊಂದಿಗೆ ಕೃಷಿ ಪ್ರದೇಶದ ವಿಸ್ತರಣೆ ಕೂಡಾ ಆಗಬೇಕು ಎಂದು ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ಅವರು ಇಂದು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದಲ್ಲಿ ಕೃಷಿ ಮಹೋತ್ಸವ -2021 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಚಟುವಟಿಕೆಗಳಿಗೆ ಇತ್ತೀಚೆಗೆ ದೊಡ್ಡ ಪ್ರಮಾಣದಲ್ಲಿ ಆಸಕ್ತಿ, ಮತ್ತು ಕುತೂಹಲ ನಿರ್ಮಾಣವಾಗಿದೆ. ಕೊರೊನಾದಿಂದಾಗಿ ಬೇರೆ ಎಲ್ಲಾ ಕ್ಷೇತ್ರಗಳಿಗೆ ನಷ್ಟ ಆಗಿದ್ದನ್ನು ನೋಡಿರಬಹುದು. ಆದರೆ ಕೃಷಿ ಕ್ಷೇತ್ರ ತನ್ನ ವ್ಯಾಪಕತೆಯನ್ನು ವಿಸ್ತರಿಕೊಂಡಿದ್ದು, ಹೆಚ್ಚು ಜನ ಕೃಷಿಯಕಡೆಗೆ ಆಕರ್ಷಿತರಾಗಿದ್ದು, ಈ ಬಾರಿ ಜಿಲ್ಲೆಯಲ್ಲಿ ಶೇ.7 ರಷ್ಟು ಹೆಚ್ಚು ಭಿತ್ತನೆ ನಡೆದಿದೆ. ಕಾರ್ಕಳ ಕಜೆ ತಳಿಯ ಕುರಿತಂತೆ 1.5 ವರ್ಷದಿಂದ ಸಂಶೋಧನೆಗಳು ನಡೆಯುತ್ತಿದ್ದು, ಈ ತಳಿಯ ತಾಂತ್ರಿಕ ತೊಡಕುಗಳನ್ನು ನಿವಾರಿಸಿ, ಶೀಘ್ರದಲ್ಲಿ ಇದನ್ನು ಅಧಿಕೃತವಾಗಿ ಕೃಷಿ ಇಲಾಖೆಗೆ ಸೇರ್ಪಡೆಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ಕಾಲೇಜು ಆರಂಭಿಸುವ ಕುರಿತಂತೆ ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರೊಂದಿಗೆ ಚರ್ಚಿಸಿರುವುದಾಗಿ ಹೇಳಿದ ಸಚಿವರು, ಕಾಲೇಜು ಆರಂಭದಿಂದ ಈ ಪ್ರದೇಶದಲ್ಲಿ ಕೃಷಿಗೆ ಇನ್ನಷ್ಟು ಪ್ರೋತ್ಸಾಹ ದೊರೆಯಲಿದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯಮಶೀಲತೆ ಆಗುವ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಸಹ್ಯಾದ್ರಿ ಬ್ರಹ್ಮ,ಸಹ್ಯಾದ್ರಿ ಪಂಚಮುಖಿ,ಕಜೆ 25-9 ತಳಿಗಳನ್ನು ಬಿಡುಗಡೆಗೊಳಿಸಿದ ಸಚಿವರು ಭತ್ತದ ಕೃಷಿಯಲ್ಲಿ ಯಾಂತ್ರಿಕತೆ ಬಳಸಿಕೊಂಡ ಯಶಸ್ವಿ ರೈತರನ್ನು ಸನ್ಮಾನಿಸಿದರು.
ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತುತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಸಮುದಾಯಕ್ಕೆ ಕೃಷಿ ಉತ್ಪನ್ನಗಳ ಮೂಲದ ಬಗೆಗಿನ ಅರಿವಿನ ಕೊರತೆಯಿದೆ. ಕೃಷಿ ಬಗ್ಗೆ ಅರಿವು ಮೂಡಿಸುವ ಕೆಲಸ ವಿದ್ಯಾರ್ಥಿ ಜೀವನದಲ್ಲಿಯೇ ಆಗಬೇಕು ಎಂದರು.
ಸಹ ಸಂಶೋಧನಾ ನಿರ್ದೇಶಕ ಡಾ. ಲಕ್ಷ್ಮಣ ಸ್ವಾಗತಿಸಿ, ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಶಂಕರ್ ಎಂ ನಿರೂಪಿಸಿ, ಹಿರಿಯ ವಿಜ್ಞಾನಿ ಡಾ. ಧನಂಜಯ ಬಿ ವಂದಿಸಿದರು.