ಜಿಲ್ಲಾಡಳಿತದ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ವರ್ತಕರಿಗೆ ಜಿಲ್ಲಾಧಿಕಾರಿ ಸೂಚನೆ

 ಜಿಲ್ಲಾಡಳಿತದ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ವರ್ತಕರಿಗೆ ಜಿಲ್ಲಾಧಿಕಾರಿ ಸೂಚನೆ
Share this post

ಮಂಗಳೂರು ಸೆ.3, 2021: ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಕಾಲಕಾಲಕ್ಕೆ ಹೊರಡಿಸುವ ಆದೇಶಗಳನ್ನು ಜಿಲ್ಲೆಯ ವರ್ತಕರು ಪಾಲಿಸಬೇಕು, ಉಲ್ಲಂಘಿಸಿದ್ದಲ್ಲಿ, ಸೂಕ್ತ ಕ್ರಮ ಜರುಗಿಸುವ ಬಗ್ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅವರು ಸೆಪ್ಟೆಂಬರ್ 3ರ ಶುಕ್ರವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್, ಜಿಲ್ಲೆಯ ಎಲ್ಲಾ ತಾಲೂಕುಗಳ ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿಡಿಯೋ ಸಂವಾದ ಸಭೆಯಲ್ಲಿ  ಈ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ವಾರಾಂತ್ಯ ಮತ್ತು ರಾತ್ರಿ ಕಫ್ರ್ಯೂಗಳು ಜಾರಿಯಲ್ಲಿದೆ. ಸರ್ಕಾರದ ಮುಂದಿನ ಆದೇಶದವರೆಗೂ ವರ್ತಕರು ಈ ಆದೇಶಗಳನ್ನು ಪಾಲಿಸಬೇಕು. ಅದನ್ನು ಮೀರಿ ಅಂಗಡಿ ಮುಂಗಟ್ಟುಗಳನ್ನು ತೆರೆದು ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತವರ ವಿರುದ್ಧ ದಂಡ ವಿಧಿಸುವುದರೊಂದಿಗೆ, ಕಾನೂನು ರೀತಿಯಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು, ಈ ಎಲ್ಲಾ ಕ್ರಮಗಳ ಕುರಿತು ಮುಂದಿನ ವಾರದಲ್ಲಿ ವರ್ತಕರ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.

ಜಿಲ್ಲೆಯ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಕೋವಿಡ್ ಲಸಿಕೆ ನೀಡಲು ತಿಳಿಸಿದ ಅವರು, ಆಯಾ ದಿನಗಳಂದು ಜಿಲ್ಲೆ ಬರುವ ಲಸಿಕೆಯನ್ನು ಅದೇ ದಿನವೇ ನೀಡಬೇಕು ಹಾಗೂ ಪ್ರತಿದಿನ 15 ಸಾವಿರಕ್ಕೂ ಹೆಚ್ಚಿನ ಕೋವಿಡ್ ತಪಾಸಣೆ ಮಾಡಬೇಕು, ಹೋಂ ಕ್ವಾರಂಟೈನ್‍ನಲ್ಲಿರುವ ಪ್ರತಿಯೊಬ್ಬರನ್ನು ಆಯಾ ವ್ಯಾಪ್ತಿಯ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ನಿಗಾ ವಹಿಸಬೇಕು ಹಾಗೂ ಅವರು ಹೊರಗೆ ಬಾರದಂತೆ ಎಚ್ಚರ ವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಹೊರಡಿಸಿರುವ ವಾರಾಂತ್ಯ ಹಾಗೂ ರಾತ್ರಿ ಕಫ್ರ್ಯೂಗಳನ್ನು ಪ್ರತಿಯೊಬ್ಬರೂ ಚಾಚುತಪ್ಪದೇ ಪಾಲಿಸಬೇಕು. ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತಿಳಿಸಿದರು.

ಗಡಿ ಭಾಗದಲ್ಲಿರುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಕೋವಿಡ್ ತಪಾಸಣೆ ಮಾಡಬೇಕು ಹಾಗೂ ಕೋವಿಡ್ ಲಸಿಕೆ ನೀಡಬೇಕು ಇದರಿಂದ ಕೊರೊನಾ ಸೋಂಕು ಹರಡುವಿಕೆಯನ್ನು ಗಣನೀಯವಾಗಿ ಪತ್ತೆಹಚ್ಚಿ ನಿಯಂತ್ರಣ ಮಾಡಲು ಸಹಕಾರಿಯಾಗುತ್ತದೆ. ಆಯಾ ವ್ಯಾಪ್ತಿಯ ಆರೋಗ್ಯಾಧಿಕಾರಿಗಳು ಕೋವಿಡ್ ನಿಯಂತ್ರಿಸುವ ಸಂಪೂರ್ಣ ಜವಬ್ದಾರಿ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಶೀತ, ಕೆಮ್ಮು ಮತ್ತು ಜ್ವರ ಎಂದು ಬರುವ ಜನರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಬೇಕು. ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಲ್ಲಿ ಅಂತವರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಿಸಬೇಕು, ಕೋವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವುದರೊಂದಿಗೆ ಒಂದೇ ಕುಟುಂಬದಲ್ಲಿ 2 ಕ್ಕಿಂತ ಹೆಚ್ಚು ಸೋಂಕಿತರು ಕಂಡು ಬಂದಲ್ಲಿ ಅಂತಹ ಸ್ಥಳಗಳನ್ನು ಮೈಕ್ರೋಕಂಟೈನ್‍ಮೆಂಟ್ ಜೋನ್ ಮಾಡಬೇಕು ಎಂದರು.
ನಗರ ವ್ಯಾಪ್ತಿಯಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಹೋಂ ಕ್ವಾರಂಟೈನ್‍ನಲ್ಲಿರುವ ಸೋಂಕಿತರನ್ನು ಆಯಾ ವ್ಯಾಪ್ತಿಯ ಸಂಬಂಧಿಸಿದ ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಬೇಕು. ಸೋಂಕಿತರಲ್ಲಿ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಅಂತವರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಕೂಡಲೇ ದಾಖಲಿಸಬೇಕು ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳ ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಸಹಾಯಕರು ಹಾಗೂ ಇತರ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿದ್ದರು.

Subscribe to our newsletter!

Other related posts

error: Content is protected !!