ಎಲ್ಲಾ ಜಿಲ್ಲೆಗಳಲ್ಲಿಯೂ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಚಿಂತನೆ: ಡಿ.ಎಸ್. ವೀರಯ್ಯ

 ಎಲ್ಲಾ ಜಿಲ್ಲೆಗಳಲ್ಲಿಯೂ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಚಿಂತನೆ: ಡಿ.ಎಸ್. ವೀರಯ್ಯ
Share this post

ಮಂಗಳೂರು, ಆ.19, 2021: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸುಸಜ್ಜಿತ ಟ್ರಕ್ ಟರ್ಮಿನಲ್‍ಗಳ ನಿರ್ಮಾಣಕ್ಕೆ ಸರ್ಕಾರ ಚಿಂತಿಸಿದೆ ಎಂದು ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್‍ನ ಅಧ್ಯಕ್ಷ ಡಿ.ಎಸ್. ವೀರಯ್ಯ ಅವರು ತಿಳಿಸಿದರು.

ಅವರು ಗುರುವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಮಂಗಳೂರು ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಪಡೆಯುವ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಲಾರಿ ಚಾಲಕರಿಗೆ ಸೌಲಭ್ಯಗಳನ್ನು ಒದಗಿಸಿಕೊಡಲು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಮೂಲಭೂತ ಸೌಕರ್ಯವುಳ್ಳ ಟ್ರಕ್ ಟರ್ಮಿನಲ್ಸ್‍ಗಳ ನಿರ್ಮಾಣ ಅಗತ್ಯ, ಆ ಹಿನ್ನಲೆಯಲ್ಲಿ ದೇವರಾಜ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್ ವತಿಯಿಂದ ಟ್ರಕ್ ಟರ್ಮಿನಲ್ಸ್‍ಗಳು ಹಾಗೂ ಟ್ರಕ್ ಬೇಗಳನ್ನು ನಿರ್ಮಿಸಲು ಅಗತ್ಯ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದರು.

ಈಗಾಗಲೇ ಬೆಂಗಳೂರಿನ ಯಶವಂತಪುರದಲ್ಲಿ 40 ಎಕರೆ, ದಾಸನಪುರದಲ್ಲಿ 15 ಎಕರೆ, ಹೊಸಪೇಟೆಯಲ್ಲಿ 53 ಎಕರೆ ಪ್ರದೇಶ ಸೇರಿದಂತೆ ಮೈಸೂರಿನಲ್ಲಿ ಟ್ರಕ್ ಟರ್ಮಿನಲ್‍ಗಳ ನಿರ್ಮಾಣವಾಗಿದೆ. ಹುಬ್ಬಳ್ಳಿಯಲ್ಲಿ 46 ಎಕರೆ ಪ್ರದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಟ್ರಕ್ ಟರ್ಮಿನಲ್ಸ್ ನಿರ್ಮಾಣ ಮಾಡಲಾಗುವುದು. ವ್ಹೇ ಬ್ರಿಜ್ಡ್, ಡಾರ್ಮೆಟರಿ, ರೆಸ್ಟೋರೆಂಟ್‍ಗಳು, ಕ್ಲಿನಿಕ್‍ಗಳು, ಪೊಲೀಸ್ ಸ್ಟೇಷನ್, ಶೌಚಾಲಯಗಳು, ವಾಹನಗಳ ಬಿಡಿ ಭಾಗಗಳು ದೊರೆಯುವ ಮಳಿಗೆಗಳು ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯವುಳ್ಳ ಟ್ರಕ್ ಟರ್ಮಿನಲ್ಸ್‍ಗಳಲ್ಲಿರಲಿದೆ. ಹಾಗಾಗಿ ರಸ್ತೆ ಬದಿಯಲ್ಲಿ ಟ್ರಕ್‍ಗಳನ್ನು ನಿಲ್ಲಿಸಿ, ವಿಶ್ರಾಂತಿ ಮಾಡುವ ಚಾಲಕರಿಗೆ ಇದು ಅನುಕೂಲವಾಗಲಿದೆ.

ಅಲ್ಲದೇ ಲಾರಿ ಮಾಲೀಕರಿಗೂ ಟರ್ಮಿನಲ್‍ಗಳು ಉಪಯುಕ್ತವಾಗಲಿವೆ,.ಈ ಟರ್ಮಿನಲ್‍ಗಳನ್ನು ಸರ್ಕಾರ ಲಾಭಕ್ಕಾಗಿ ನಿರ್ಮಿಸುತ್ತಿಲ್ಲ. ಅಪಘಾತಗಳನ್ನು ತಡೆಗಟ್ಟಲು ಹಾಗೂ ರಸ್ತೆ ಬದಿ ವಾಹನ ದಟ್ಟನೆ ಕಡಿಮೆ ಮಾಡಲು ನಿರ್ಮಿಸಲಾಗುತ್ತದೆ. ಕೇಂದ್ರ ಸರ್ಕಾರದ ನೀತಿ ಕೂಡ ಅದೇ ಆಗಿದ್ದು, ಪ್ರಧಾನ ಮಂತ್ರಿಗಳೂ ಕೂಡ ಅಗತ್ಯವಿರುವೆಡೆ ಟ್ರಕ್ ಟರ್ಮಿನಲ್‍ನ ನಿರ್ಮಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದರು.

ಮಂಗಳೂರಿನಲ್ಲಿ ಪ್ರತಿ ದಿನ ಒಂದು ಸಾವಿರಕ್ಕೂ ಹೆಚ್ಚಿನ ಲಾರಿಗಳು ಸಂಚರಿಸುತ್ತವೆ. ಅವುಗಳ ಸುಗಮ ಸಂಚಾರ ಹಾಗೂ ಪಾರ್ಕಿಂಗ್‍ಗಾಗಿ ನಗರದ ಆಸು-ಪಾಸಿನಲ್ಲಿ ಅತ್ಯುತ್ತಮ ಟ್ರಕ್ ಟರ್ಮಿನಲ್ ನಿರ್ಮಿಸಲು ರಾಜ್ಯ ಸರ್ಕಾರದಿಂದ ಕ್ರಮಕೈಗೊಳ್ಳಲಾಗುತ್ತಿದೆ. ಹಾಗಾಗಿ ಹೆದ್ದಾರಿ ಬಳಿ 15 ರಿಂದ 20 ಎಕರೆ ಭೂಮಿಯನ್ನು ನೀಡಿದರೆ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ನವ ಮಂಗಳೂರು ಬಂದರು ಟ್ರಸ್ಟ್‍ನ ಮುಖ್ಯ ಎಂಜಿನಿಯರ್ ಹರಿನಾಥ್ ಮಾತನಾಡಿ, ಕೆಲವು ಷರತ್ತಿಗೊಳಪಟ್ಟು ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಅಗತ್ಯ ಭೂಮಿ ನೀಡಬಹುದಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಾತನಾಡಿ, ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್ ವತಿಯಿಂದ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲು ಈ ಹಿಂದೆ ಸುರತ್ಕಲ್‍ನ ಪಾವಂಜೆ ಸೇತುವೆಯ ನಂತರದಲ್ಲಿ ಖಾಸಗಿ ಸ್ಥಳವೊಂದನ್ನು ಗುರುತಿಸಲಾಗಿತ್ತು. ಆದರೆ ಅಲ್ಲಿ ದರ ಸಂಧಾನದ ವಿಚಾರದಲ್ಲಿ ಸರ್ಕಾರ ನಿಗದಿ ಮಾಡಿದ ದರ ಹಾಗೂ ಖಾಸಗಿಯವರು ಕೇಳಿದ್ದ ದರಕ್ಕೂ ಬಹಳಷ್ಟು ವ್ಯತ್ಯಾಸವಿತ್ತು. ಹಾಗಾಗಿ ಅದು ಮುನ್ನೆಲೆಗೆ ಬರಲಿಲ್ಲ, ಎನ್.ಎಂ.ಪಿ.ಟಿ. ವ್ಯಾಪ್ತಿಗೆ ಒಳಪಡುವ ಜಾಗ ಸೂಕ್ತವೂ ಆಗಿದ್ದು, ಬೈಕಂಪಾಡಿ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತ ಎಸ್.ಇ.ಝಡ್. (ವಿಶೇಷ ಆರ್ಥಿಕ ವಲಯ)ದಡಿ ಬರಲಿದೆ, ಮಂಗಳೂರು ನಗರ ಪ್ರವೇಶಕ್ಕೂ ಮುನ್ನ ಒಂದು ವ್ಯವಸ್ಥಿತವಾದ ಸ್ಥಳವನ್ನು ಗುರುತಿಸುವಂತೆ ಎನ್.ಎಂ.ಪಿ.ಟಿಯ ಮುಖ್ಯ ಎಂಜಿನಿಯರ್‍ಗೆ ಸೂಚಿಸಿದರು.

ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ನವ ಮಂಗಳೂರು ಬಂದರು ಟ್ರಸ್ಟ್‍ನ ಮುಖ್ಯ ಎಂಜಿನಿಯರ್ ಹರಿನಾಥ್ ಜಿಲ್ಲೆಯಲ್ಲಿ ಟಕ್ರ್ ಟರ್ಮಿನಲ್ ನಿರ್ಮಾಣಕ್ಕೆ ಸೂಕ್ತ ಸ್ಥಳ ಪರಿಶೀಲಿಸಿ ವರದಿ ನೀಡುವುದಾಗಿ ತಿಳಿಸಿದರು.

Subscribe to our newsletter!

Other related posts

error: Content is protected !!