ಪೌರಕಾರ್ಮಿಕರ ಅಗತ್ಯಕ್ಕೆ ಸಣ್ಣ ಕೊಠಡಿಗಳ ನಿರ್ಮಾಣಕ್ಕೆ ಕ್ರಮವಹಿಸಲು ಜಿಲ್ಲಾಧಿಕಾರಿ ಸೂಚನೆ

 ಪೌರಕಾರ್ಮಿಕರ ಅಗತ್ಯಕ್ಕೆ ಸಣ್ಣ ಕೊಠಡಿಗಳ ನಿರ್ಮಾಣಕ್ಕೆ ಕ್ರಮವಹಿಸಲು ಜಿಲ್ಲಾಧಿಕಾರಿ ಸೂಚನೆ
Share this post

ಮಂಗಳೂರು,ಜು.24, 2021: ಜಿಲ್ಲೆಯ ಪೌರಕಾರ್ಮಿಕರು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಊಟ-ಉಪಹಾರ ಸೇವನೆ ಸೇರಿದಂತೆ ಇತರೆ ಅಗತ್ಯಕ್ಕೆ ಸಣ್ಣ ಕೊಠಡಿಗಳನ್ನು ನಿರ್ಮಿಸಿ ಕೊಡಲು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ನಿರ್ದೇಶನ ನೀಡಿದರು.

ಅವರು ನಗರದ ಜಿಲ್ಲಾಧಿಕಾರಿಯವರ ನ್ಯಾಯಾಲಯದ ಸಭಾಂಗಣದಲ್ಲಿ ಜುಲೈ 23 ರ ಸಂಜೆ ಹಮ್ಮಿಕೊಳ್ಳಲಾಗಿದ್ದ ಸಫಾಯಿ ಕರ್ಮಚಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ತವ್ಯ ನಿರ್ವಹಣೆ ವೇಳೆಯಲ್ಲಿ ಪೌರಕಾರ್ಮಿಕರಿಗೆ ಊಟ-ಉಪಹಾರ ಸೇವನೆ, ಸಮವಸ್ತ್ರ ಧರಿಸುವುದು ಸೇರಿದಂತೆ ಇತರೆ ಅಗತ್ಯಗಳಿಗೆ ಅನುಗುಣವಾಗಿ ಅವರುಗಳು ಕೆಲಸ ಮಾಡುವ ವಾರ್ಡ್‍ಗಳು ಅಥವಾ ಆಯಾ ವಾರ್ಡ್‍ಗಳ ಆಸುಪಾಸಿನ ಸ್ಥಳಗಳಲ್ಲಿ ಸಣ್ಣ ಕೊಠಡಿಯನ್ನು ನಿರ್ಮಿಸಿ ಕೊಡಬೇಕು. ಅದಕ್ಕೆ ಸರ್ಕಾರಿ ಜಾಗ ಲಭ್ಯವಿದ್ದರೆ ಅಲ್ಲೇ ನಿರ್ಮಿಸಬೇಕು, ಇಲ್ಲದಿದ್ದರೇ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದರು.

ಸಂಚರಿಸಲು ಸಾಧ್ಯವಿಲ್ಲದೇ ಸ್ಥಗಿತಗೊಂಡಿರುವ ಕೆ.ಎಸ್.ಆರ್.ಟಿ.ಸಿ ಬಸ್‍ಗಳಲ್ಲಿ ಕೆಲವು ಮಾರ್ಪಾಡು ಮಾಡಿ ಅಥವಾ ಹಡಗುಗಳ ಕಂಪಾರ್ಟ್‍ಮೆಂಟ್‍ಗಳನ್ನು ಇದಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳ ಕುರಿತು ಚಿಂತಿಸಬಹುದಾಗಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತರು, ಪೌರಾಯುಕ್ತರು, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.

ಪೌರಕಾರ್ಮಿಕರಿಗೆ ಆದ್ಯತೆಯ ಮೇರೆಗೆ ಕೋವಿಡ್ ವ್ಯಾಕ್ಸಿನ್ ನೀಡಬೇಕು ಹಾಗೂ ಅವರ ಕುಟುಂಬದ ಸದಸ್ಯರಿಗೂ ಕೂಡ ಮುಖ್ಯವಾಗಿ ಅವರನ್ನು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಜಿಲ್ಲೆಯಲ್ಲಿ ಯಾರೂ ಕೂಡ ಮ್ಯಾನ್‍ಹೋಲ್‍ಗಳಲ್ಲಿ ಇಳಿಯದಂತೆ ಎಚ್ಚರವಹಿಸಬೇಕು ಎಂದರು.

ಪೌರಕಾರ್ಮಿಕರ ನೇಮಕಕ್ಕೆ ಅನುಮತಿ ದೊರೆತಿದೆ, ಈ ಬಗ್ಗೆ ಕೂಡಲೇ ಅಧಿಸೂಚನೆ ಹೊರಡಿಸಲಾಗುವುದು. ಅವರ ನೇಮಕಾತಿಗಾಗಿ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಸಭೆಗೆ ಮಾಹಿತಿ ನೀಡಿದರು.

ಡಿಸಿಪಿ ಹರಿರಾಂ ಶಂಕರ್, ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೇಶ್ ಎಸ್.ಬಿ, ಸಮಿತಿಯ ಸದಸ್ಯರು, ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿದ್ದರು.

Subscribe to our newsletter!

Other related posts

error: Content is protected !!