ವಿಸ್ಟಾಡೋಮ್: ಸಂಸದರಿಂದ ಹಸಿರು ನಿಶಾನೆ
ಮಂಗಳೂರು, ಜುಲೈ 11, 2021: ಮಾನವರಹಿತ ರೈಲ್ವೆ ಕ್ರಾಸಿಂಗ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಚಿಂತನೆ ನಡೆಸಿದ್ದು, ಈ ದಿಸೆಯಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಸಂಸದರಾದ ನಳೀನ್ ಕುಮಾರ್ ಕಟೀಲ್ ತಿಳಿಸಿದರು.
ಅವರು ಭಾನುವಾರ ಮಂಗಳೂರು ರೈಲು ನಿಲ್ದಾಣದ ಜಂಕ್ಷನ್ ನಲ್ಲಿ ಯಶವಂತಪುರ- ಮಂಗಳೂರು ನಡುವೆ ಸಂಚರಿಸುವ ವಿಸ್ಟಾಡೋಮ್ ಬೋಗಿಗಳ ರೈಲಿಗೆ ಹಸಿರು ನಿಶಾನೆ ತೋರಿ ಮಾತನಾಡಿದರು.
ರೈಲ್ವೆ ಇಲಾಖೆಯು, ದಕ್ಷಿಣ ಕನ್ನಡ ಜಿಲ್ಲೆಗೆ ಸಾಕಷ್ಟು ಯೋಜನೆಗಳನ್ನು ನೀಡಿದೆ. 2014ರಿಂದ ಕೆಲವು ಯೋಜನೆಗಳು ಹೆಚ್ಚು ವೇಗ ಪಡೆದಿವೆ. ರೈಲಿನಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಅದರಂತೆಯೇ ಹೆಚ್ಚಿನ ಅನುದಾನವನ್ನು ಸಹ ನೀಡಲಾಗುತ್ತದೆ. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ 13.5 ಕೋಟಿ ಹಾಗೂ ಮಂಗಳೂರು ಜಂಕ್ಷನ್ ಗೆ 1.2 ಕೋಟಿ ರೂ.ಗಳು ಸೇರಿದಂತೆ ಒಟ್ಟು 15 ಕೋಟಿ ರೂ.ಗಳಲ್ಲಿ ಕೈಗೊಳ್ಳಲಾದ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಅದರೊಂದಿಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲೂ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಂಗಳೂರು – ವಿಜಾಪುರ ರೈಲು ಸಮಯದಲ್ಲಿ ಬದಲಾವಣೆ ಆಗಬೇಕು, ಅದು ಮಂಗಳೂರು ಸೆಂಟ್ರಲ್ ನಿಂದ ಸಂಚರಿಸಬೇಕು, ಹಗಲಿನಲ್ಲಿ ಸಂಚರಿಸುವ ಗೋಮ್ಮಟೇಶ್ವರ ಎಕ್ಸ್ ಪ್ರೆಸ್ ರೈಲು ಯಶವಂತಪುರದಿಂದ 8.15ರ ಬದಲಾಗಿ 9.30ಕ್ಕೆ ಹೊರಡಬೇಕು, ವಾರದ 7 ದಿನ ಸಂಚರಿಸಬೇಕು ಎನ್ನುವ ಬೇಡಿಕೆ ಪ್ರಯಾಣಿಕರದ್ದಾಗಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರವಾಸೋದ್ಯಮಕ್ಕೆ ಮತ್ತಷ್ಟು ಪುಷ್ಠಿ ನೀಡಲು ಪ್ರಯಾಣಿಕರಿಗೆ ಪಶ್ಚಿಮಘಟ್ಟದ ಬೆಟ್ಟಗುಡ್ಡಗಳು, ಝರಿ ತೋರೆಗಳು ಸೇರಿದಂತೆ ಪ್ರಕೃತಿಯ ರಮಣೀಯ ಸೊಬಗನ್ನು ವೀಕ್ಷಿಸಲು ಅನುಕೂಲವಾಗುವಂತೆ ರೈಲ್ವೆ ಇಲಾಖೆಯಿಂದ ವಿಸ್ಟಾಡೋಮ್ ಬೋಗಿಗಳ ರೈಲು ಪ್ರಯಾಣಕ್ಕೆ ಇಂದು ಚಾಲನೆ ನೀಡಲಾಗಿದೆ, ಪ್ರತಿ ಬೋಗಿಯಲ್ಲಿ ಒಟ್ಟು 44 ಆಸನಗಳಿವೆ, ಈ ಬೋಗಿಯಲ್ಲಿ ಫೋಟೋಗ್ರಫಿಗೆ ಪ್ರತ್ಯೇಕ, ವಿಕಲಚೇತನರ ಅನುಕೂಲಕ್ಕೆ ಪ್ರತ್ಯೇಕ ಸ್ಥಳಾವಕಾಶ ಸೇರಿದಂತೆ ಮೆಟ್ರೋ ರೈಲಿನಲ್ಲಿ ಸಂಚರಿಸಿದ ಅನುಭವವಾಗಲಿದೆ,ಅತಿ ದೊಡ್ಡ ಗಾಜಿನ ಕಿಟಕಿಗಳಿಂದಾಗಿ ರೈಲು ಪ್ರಯಾಣಿಕರು ಪ್ರಾಕೃತಿಕ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಮೇಯರ್ ಪ್ರೇಮಾನಂದ ಶೆಟ್ಟಿ, ರೈಲ್ವೆ ಇಲಾಖೆಯ ಡಿಆರ್ ಎಂ ತ್ರಿಲೋಕ್ ಕೊಠಾರಿ, ಮಹಾನಗರ ಪಾಲಿಕೆಯ ಸದಸ್ಯರುಗಳಾದ ಸುಧೀರ್, ಶೋಭಾ, ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.