ಎಸ್ಸೆಸ್ಸೆಲ್ಸಿ ಪರೀಕ್ಷೆ : ಸೂಕ್ತ ಸಿದ್ದತೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ

 ಎಸ್ಸೆಸ್ಸೆಲ್ಸಿ ಪರೀಕ್ಷೆ : ಸೂಕ್ತ ಸಿದ್ದತೆಗೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ
Share this post

ಮಂಗಳೂರು, ಜುಲೈ 3, 2021: ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಅಚ್ಚುಕಟ್ಟಿನ ಸಿದ್ಧತೆಗಳನ್ನು ಮಾಡಿಕೊಂಡು ಸುಸೂತ್ರವಾಗಿ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವಭಾವಿ ಸಿದ್ಧತೆಗಳ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಬಾರಿಯ ಪರೀಕ್ಷೆಯಲ್ಲಿ ಒಂದು ಕೊಠಡಿಯಲ್ಲಿ ಹದಿನೆಂಟು ವಿದ್ಯಾರ್ಥಿಗಳಿಗೆ ಅವಕಾಶವಿತ್ತು, ಈ ಬಾರಿ 12 ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಲಾಗಿದೆ. ಇದು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತಷ್ಟು ಅನುಕೂಲವಾಗಿದೆ. ಕೇರಳದ ಗಡಿಭಾಗದಿಂದ ಈ ಪರೀಕ್ಷೆ ಬರೆಯಲು 441 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಈಗಿನಿಂದಲೇ ಕ್ರಮಕೈಗೊಳ್ಳಬೇಕು ಎಂದರು.

ಸಾರಿಗೆ ಇಲಾಖೆಯಿಂದ ಪರೀಕ್ಷಾರ್ಥಿಗಳ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡಬೇಕು. ಪಾಸಿಟಿವ್ ಲಕ್ಷಣವುಳ್ಳ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ವ್ಯವಸ್ಥೆ ಆಗಬೇಕು. ಅಲ್ಲಿ ಅಗತ್ಯ ಪೀಠೋಪಕರಣ ವ್ಯವಸ್ಥೆ ಮಾಡಿ ಪರೀಕ್ಷೆಗೆ ನೆರವಾಗಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನಿಯೋಜಿಸಿರುವ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್ ವ್ಯಾಕ್ಸಿನ್ ಪಡೆದಿರಬೇಕು. ಪಡೆಯದವರನ್ನು ಆದ್ಯತೆ ಮೇರೆಗೆ ಇಂಜೆಕ್ಷನ್ ಕೊಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳನ್ನು ಅವರಿರುವ ಸ್ಥಳಗಳಿಂದ ಕರೆತರಲು ಸಾರಿಗೆ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಕೇರಳದಿಂದ 441 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರಲಿದ್ದು, ಅವರನ್ನು ಕರೆತರಲಿರುವ ಅವರ ಪೋಷಕರು ಕಡ್ಡಾಯವಾಗಿ ಆರ್ ಟಿ ಪಿ ಸಿ ಆರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಬೇಕು, ಕೋವಿಡ್ ಪಾಸಿಟಿವ್ ಕಂಡುಬಂದ ವಿದ್ಯಾರ್ಥಿಗಳನ್ನು ಆಂಬುಲೆನ್ಸ್ ನಲ್ಲಿ ಕರೆತರಬೇಕು. ಈ ವಿದ್ಯಾರ್ಥಿಗಳಿಗೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು. ಮೇಜು, ಕುರ್ಚಿ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹಾಗೂ ಪಿಪಿ ಕಿಟ್ ಹಾಕಿಕೊಂಡು ಅವರಿಗೆ ಪ್ರಶ್ನೆಪತ್ರಿಕೆ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಒಟ್ಟು 32,567 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಎದುರಿಸಲಿದ್ದಾರೆ, ಕೋವಿಡ್ ಲಕ್ಷಣಗಳು ಬಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಲಾಗಿದೆ, ಒಟ್ಟು 3,708 ಸಿಬ್ಬಂದಿಗಳು ಸಜ್ಜಾಗಿದ್ದಾರೆ, 2,718 ಕೊಠಡಿಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲಯ್ಯಸ್ವಾಮಿ ಹೇಳಿದರು‌.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಹಾಗೂ ಶಾಸಕರಾದ ವೇದವ್ಯಾಸ ಕಾಮತ್ ಅವರು ವೇದಿಕೆಯಲ್ಲಿದ್ದರು.

Subscribe to our newsletter!

Other related posts

error: Content is protected !!