ಕನ್ನಡ ಪ್ರದೇಶಗಳ ಹೆಸರು ಬದಲಾವಣೆ: ಸುರೇಶ್ ಕುಮಾರ್ ಆಕ್ರೋಶ
ಬೆಂಗಳೂರು, ಜೂನ್ 28, 2021: ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸೇರಿದಂತೆ ಕನ್ನಡ ಪ್ರದೇಶಗಳ ಕೆಲವು ಗ್ರಾಮಗಳ ಹೆಸರುಗಳನ್ನು ಕೇರಳ ಸರ್ಕಾರ ಬದಲಾಯಿಸಲು ನಿರ್ಧರಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇದು ಯಾವುದೇ ಕಾರಣಕ್ಕೂ ಸಾಧುವಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾವುದೇ ನಗರ, ಹಳ್ಳಿ ಇಲ್ಲವೇ ಸ್ಥಳದ ಹೆಸರುಗಳು ತನ್ನದೇ ಆದ ಮಹತ್ವ ಹಾಗೆಯೇ ಐತಿಹಾಸಿಕ ಹಿನ್ನಲೆ ಹೊಂದಿದ್ದು, ಅವುಗಳನ್ನು ಬದಲಾಯಿಸುವುದು ಆ ಭಾಗದ ಜನರ ಭಾವನೆಗಳಿಗೆ ಧಕ್ಕೆ ತರುವ ಕ್ರಮವಾಗಿದ್ದು, ಕನ್ನಡಿಗರ ಭಾವನೆಗಳೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಹೇಳಿದರು.
ಯಾವುದೇ ಸ್ಥಳದ ಹೆಸರನ್ನು ಯಾರು ಹೇಗೆಯೇ ಏನೇ ಬದಲಾಯಿಸಿದರೂ ಜನರು ಮಾತ್ರ ತಮ್ಮ ಹಳೆಯ ಹೆಸರುಗಳಿಂದಲೇ ಕರೆಯುತ್ತಾರೆ. ಯಾವುದೋ ದುರುದ್ದೇಶದಿಂದ ಹೆಸರು ಬದಲಾವಣೆ ಮಾಡಿದ ಮಾತ್ರಕ್ಕೆ ಆ ಸ್ಥಳಗಳ ಹೆಸರನ್ನು ಜನರ ಮನಸ್ಸಿನಿಂದ ಬದಲಾಯಿಸಲು ಸಾಧ್ಯವೇ ಆಗದು ಎಂದು ಸುರೇಶ್ ಕುಮಾರ್ ಹೇಳಿದರು.
ಈ ಕುರಿತು ಕರ್ನಾಟಕ ಗಡಿ ಅಭಿವೃದ್ಧಿ ಮಂಡಳಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಈಗಾಗಲೇ ಆ ರಾಜ್ಯಕ್ಕೆ ಪತ್ರ ಬರೆದು ಆ ಸ್ಥಳ ಹೆಸರುಗಳ ಮಹತ್ವವನ್ನು ತಿಳಿಸಿದ್ದಾರೆ. ಯಾವುದೇ ಕನ್ನಡ ಪ್ರದೇಶಗಳ ಸ್ಥಳಗಳ ಹೆಸರುಗಳನ್ನು ಬದಲಾಯಿಸಬಾರದೆಂದು ತಾನೂ ಆಗ್ರಹಿಸುತ್ತೇನೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.