ಸೇಕ್ರೆಡ್ ಹಾರ್ಟ್ ಕಾಲೇಜು: ಕೋವಿಡ್ ಮೂರನೇ ಅಲೆ ತಡೆಗಟ್ಟುವ ನೆಲೆಯಲ್ಲಿ ವೆಬಿನಾರ್
ಮಡಂತ್ಯಾರ್, ಜೂನ್ 21, 2021: ಮಡಂತ್ಯಾರ್ ನ ಸೇಕ್ರೆಡ್ ಹಾರ್ಟ್ ಕಾಲೇಜು ಪಿಜಿ ವಾಣಿಜ್ಯ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ‘ಕೋವಿಡ್ ಮೂರನೇ ಅಲೆ: ಮುನ್ನೆಚ್ಚರಿಕೆಗಳು ಮತ್ತು ತಡೆಗಟ್ಟುವ ರಕ್ಷಣಾ ಕ್ರಮ’ ಕುರಿತು ವೆಬಿನಾರ್ ಕಾರ್ಯಕ್ರಮವನ್ನು ಜೂನ್ 17 ರಂದು ಗೂಗಲ್ ಮೀಟ್ ಮೂಲಕ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ ಜೋಸೆಫ್ ಎನ್ ಎಂ ವಹಿಸಿದರು.
ವೆನ್ಲಾಕ್ ಆಸ್ಪತ್ರೆಯ ವೈದ್ಯರು ಹಾಗೂ ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಗಳಾದ ಡಾ ಸದಾನಂದ ಪೂಜಾರಿ ಈ ರೋಗದ ಬಗ್ಗೆ ಮಾತನಾಡುತ್ತಾ ರೋಗವನ್ನು ನಿರ್ಲಕ್ಷಿಸಬೇಡಿ, ಕೊರೊನ ಇಲ್ಲವೆಂದು ಮೊಂಡುವಾದ ಮಾಡಿದರೆ ಅಪಾಯ ಎದುರಾಗುತ್ತದೆ ಎಂದರು.
“ಕೊರೋನ ಬಗ್ಗೆ ಭಯ ಬೇಡ. ಆದರೆ ಎಚ್ಚರಿಕೆ ಬೇಕು. ಆಲಸ್ಯತನ ಸಲ್ಲದು. ಕೊರೊನಾ ಸೋಂಕಿತರು ಗುಣಮುಖರಾದ ಬಳಿಕ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲಿಂದ್ರ) ಕಾಣಿಸಿಕೊಳ್ಳುತ್ತಿದ್ದು ಆತಂಕ ಮೂಡಿಸಿದೆ,” ಎಂದು ಹೇಳಿದರು.
ಬ್ಲ್ಯಾಕ್ ಫಂಗಸ್ ರೋಗವು ಕಣ್ಣುಗಳಿಗೆ ಹೇಗೆ ಹರಡುತ್ತದೆ ಹಾಗೂ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಪ್ರಾತ್ಯಕ್ಷಿಕೆ ಹಾಗೂ ವಿವಿಧ ಚಿತ್ರಗಳ್ನು ತೋರಿಸಿ ವಿವರಿಸಿದರು.
ಈ ರೋಗಗಳಿಂದ ನಾವು ಪಾರಾಗಬೇಕಾದರೆ ಪ್ರತಿಯೊಬ್ಬರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು,ಮುಖಕ್ಕೆ ಮಾಸ್ಕ್ ಧರಿಸಬೇಕು, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಯಮಗಳನ್ನು ಪಾಲಿಸಬೇಕೆಂಬ ಸಲಹೆಯನ್ನು ನೀಡಿದರು
ಕಾಲೇಜಿನ ಉಪನ್ಯಾಸಕಿಯಾದ ಮಹಿತಾ ಗೌಡ ಸ್ವಾಗತಿಸಿದರು. ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು. ಗೂಗಲ್ ಮೀಟ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ 100 ಕ್ಕೂ ಅಧಿಕ ಮಂದಿ ಭಾಗವಹಿಸಿದರು.