ಸಂಪೂರ್ಣ ಸೀಲ್ ಡೌನ್ ಆಗಿರುವ ಮಿತ್ತಬಾಗಿಲನ್ನು ಕೋವಿಡ್ ಮುಕ್ತವಾಗಿಸಲು ಪಣತೊಟ್ಟಿದೆ ಪಂಚಾಯತ್ ಕಾರ್ಯಪಡೆ

 ಸಂಪೂರ್ಣ ಸೀಲ್ ಡೌನ್ ಆಗಿರುವ ಮಿತ್ತಬಾಗಿಲನ್ನು ಕೋವಿಡ್ ಮುಕ್ತವಾಗಿಸಲು ಪಣತೊಟ್ಟಿದೆ ಪಂಚಾಯತ್ ಕಾರ್ಯಪಡೆ
Share this post

ಶ್ವೇತಾ ಎಸ್

ಕಿಲ್ಲೂರು (ಮಿತ್ತಬಾಗಿಲು ಪಂಚಾಯತ್), ಜೂನ್ 17, 2021: ಇದು ಹಚ್ಚ ಹಸಿರಿನಿಂದ ಕೂಡಿದ ಪಶ್ಚಿಮ ಘಟ್ಟಗಳ ನಡುವೆ ಇರುವ ಸುಂದರವಾದ ಹಳ್ಳಿ. ಹೆಚ್ಚಾಗಿ ಕೃಷಿಯಲ್ಲಿ ತೊಡಗಿರುವ ಮಿತ್ತಬಾಗಿಲು, ಮಲವಂತಿಗೆ ಗ್ರಾಮಸ್ಥರನ್ನು ಕೋವಿಡ್ ಮೊದಲ ಅಲೆ ಬಾಧಿಸಲಿಲ್ಲ ಆದರೆ ಎರಡನೇ ಅಲೆಯು ರಾಜ್ಯದ ಇತರೆಡೆ ಹಳ್ಳಿಗಳಲ್ಲಿ ಹಬ್ಬಿದಂತೆ, ಮಿತ್ತಬಾಗಿಲನ್ನು ಕೂಡ ಕಾಡಿದೆ.

ಆರಂಭಿಕ ದಿನಗಳಲ್ಲಿ ಬಹಳ ಕಡಿಮೆ ಇದ್ದ ಸಂಖ್ಯೆ ನಂತರ ಆತಂಕಕಾರಿಯಾಗಿ ಹೆಚ್ಚಾಯಿತು.

ಐವತ್ತಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ಪಂಚಾಯಿತಿಗಳಿಗೆ ಜೂನ್ 14 ರಿಂದ 21 ರವರೆಗೆ ಜಿಲ್ಲಾಡಳಿತ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಜಿಲ್ಲೆಯ ಇಂತಹ 18 ಪಂಚಾಯಿತಿಗಳಲ್ಲಿ ಮಿತ್ತಬಾಗಿಲು ಕೂಡ ಒಂದು.

ಗಂಭೀರತೆ ಮತ್ತು ಸವಾಲನ್ನು ಅರಿತುಕೊಂಡ ಗ್ರಾಮಸ್ಥರು, ಪಂಚಾಯತ್ ಸದಸ್ಯರು ಮತ್ತು ಪಂಚಾಯತ್ ಕಾರ್ಯಪಡೆ ಸದಸ್ಯರು ಮಿತ್ತಬಾಗಿಲನ್ನು ಕೋವಿಡ್ ಮುಕ್ತ ಪಂಚಾಯತ್ ಮಾಡಲು ಪಣತೊಟ್ಟಿದ್ದಾರೆ.

ಜನರು ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿ ಆಡಳಿತದೊಂದಿಗೆ ಕೈ ಜೋಡಿಸಿದ್ದಾರೆ.

“ಪ್ರಸ್ತುತ, ಗ್ರಾಮದಲ್ಲಿ 50 ಕ್ಕೂ ಹೆಚ್ಚು ಪ್ರಕರಣಗಳಿವೆ. ಪರೀಕ್ಷೆ ಬಹಳ ನಿರ್ಣಾಯಕವಾದುದರಿಂದ, ನಾವು ನಮ್ಮ ಹಳ್ಳಿಗಳಲ್ಲಿ ವ್ಯಾಪಕವಾಗಿ ಕೋವಿಡ್ ಪರೀಕ್ಷೆ ನಡೆಸುತ್ತಿದ್ದೇವೆ. ಮೂರು ತಂಡಗಳು ಪ್ರಮುಖ ಜಾಗದಲ್ಲಿ ಪರೀಕ್ಷೆ ನಡೆಸುತ್ತಾ ಇದ್ದಾರೆ. ಹಾಲಿನ ಡಿಪೋ ಗೆ ಹೋಗುವ ಜನರ ಪರೀಕ್ಷೆ ನಡೆದಿದೆ. ಅಂಗಡಿ ಮಾಲೀಕರು ಮತ್ತು ರಿಕ್ಷಾ ಚಾಲಕರ ಪರೀಕ್ಷೆ ನಡೆಯುತ್ತಿದೆ. ಕಂಟೈನ್ಮೆಂಟ್ ಜೋನ್ ಹಾಗೂ ಅಧಿಕ ಪ್ರಕರಣಗಳನ್ನು ಹೊಂದಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೂಡ ಟೆಸ್ಟ್ ನಡೆಯುತ್ತಿದೆ.” ಎಂದು ಪಂಚಾಯತ್ ಉಪಾಧ್ಯಕ್ಷ ವಿನಯಚಂದ್ರ ಸೇನರಬೆಟ್ಟು ದಿ ಕೆನರಾ ಪೋಸ್ಟ್ ಗೆ ತಿಳಿಸಿದ್ದಾರೆ.

ಕಾರ್ಯಪಡೆ ತಂಡದೊಂದಿಗೆ ವಿನಯಚಂದ್ರ ಸ್ವತಃ ಪಂಚಾಯತ್ ಪ್ರವೇಶದ್ವಾರದಲ್ಲಿ ಹಾಕಿದ ಗೇಟಿನಲ್ಲಿ ಇರುತ್ತಾರೆ.
“ನಮ್ಮ ಹಳ್ಳಿಗೆ ಯಾರೂ ಅನಗತ್ಯವಾಗಿ ಪ್ರವೇಶಿಸುವಂತಿಲ್ಲ, ಹೊರ ಹೋಗುವ ಹಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಇಲ್ಲಿದ್ದೇವೆ. ಪೊಲೀಸ್ ಸಿಬ್ಬಂದಿಯನ್ನು ಸಹ ಗೇಟ್‌ಗಳಲ್ಲಿ ಇರಿಸಲಾಗಿದೆ” ಎಂದು ಹೇಳಿದರು.

ಪಂಚಾಯತ್ ಅಧ್ಯಕ್ಷೆ ಲಲಿತಾ ಹರೀಶ್ ಮತ್ತು ರಾಮಣ್ಣ ಕುಂಬಾರ ಅವರು ದುರ್ಗಾನಗರದಲ್ಲಿ ಹಾಕಿರುವ ಗೇಟ್ ನ ಮೇಲ್ವಿಚಾರಣೆ ಮಾಡುತ್ತಿದ್ದರೆ, ವಿನಯಚಂದ್ರ ಮತ್ತು ಪಂಚಾಯತ್ ಸದಸ್ಯ ಸಾಹುಲ್ ಹಮೀದ್ ಕಿಲ್ಲೂರ್‌ನಲ್ಲಿ ಇದ್ದಾರೆ.

ಲಾಕ್‌ಡೌನ್ ಅನ್ನು ಜಾರಿಗೊಳಿಸುವ ಜೊತೆ ಪಂಚಾಯತ್ ಸದಸ್ಯರು, ಕಾರ್ಯಪಡೆ ಸದಸ್ಯರು ಹಾಗೂ ಪಿ ಡಿ ಓ ಜಯಕೀರ್ತಿ ಜನರಿಗೆ ಯಾವುದೇ ರೀತಿಯ ತೊಂದರೆ ಎದುರಿಸದಂತೆ ನೋಡಿಕೊಳ್ಳುತ್ತಿದ್ದಾರೆ.

ಹಣ್ಣುಗಳು ಮತ್ತು ತರಕಾರಿಗಳನ್ನು ಸಾಗಿಸಲು ಹಾಗೂ ಮೀನು ತರಲು ತಲಾ ಒಂದೊಂದು ವಾಹನ ಬಿಡಲಾಗಿದೆ.

ದಿನಸಿ ಖರೀದಿಸುವ ಕುಟುಂಬಗಳು ಅಂಗಡಿಗೆ ಕರೆ ಮಾಡಿ ಪಟ್ಟಿಯನ್ನು ನೀಡಿ ಕಾರ್ಯಪಡೆಗೆ ಮಾಹಿತಿ ನೀಡಬಹುದು. ಕಾರ್ಯಪಡೆಯ ವಾಹನ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತವೆ. ರೇಷನ್ ಅಂಗಡಿಗಳಿಗೆ ಹೋಗಲು ಸಾಧ್ಯವಾಗದವರಿಗೂ ಸಾಮಗ್ರಿಗಳನ್ನು ಇದೇ ರೀತಿ ತಲುಪಿಸಲಾಗುತ್ತಿದೆ.

“ಈ ಲಾಕ್‌ಡೌನ್ ಅನ್ನು ಯಶಸ್ವಿಗೊಳಿಸಿದ ಪ್ರತಿಯೊಬ್ಬ ಗ್ರಾಮಸ್ಥರಿಗೂ ನಾವು ಕೃತಜ್ಞರಾಗಿರುತ್ತೇವೆ. ಜನರು ಆದೇಶಗಳನ್ನು ಪಾಲಿಸುತ್ತಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಅವರ ಬೆಂಬಲ ಬಹುಮುಖ್ಯವಾಗಿದೆ. ಕೋವಿಡ್ ಪರೀಕ್ಷೆಯ ಸಮಯದಲ್ಲಿ ಕೂಡಾ ಜನರು ನಮ್ಮೊಂದಿಗೆ ಸಹಕರಿಸುತ್ತಿದ್ದಾರೆ. ಎಲ್ಲರ ಬೆಂಬಲದೊಂದಿಗೆ ನಾವು ಈ ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಯ ಗಳಿಸುತ್ತೇವೆ ಎಂದು ನಮಗೆ ಖಾತ್ರಿಯಿದೆ “ಎಂದು ವಿನಯಚಂದ್ರ ಹೇಳಿದರು.

Subscribe to our newsletter!

Other related posts

error: Content is protected !!