ಬ್ಯಾಂಕ್ ಆಫ್ ಬರೋಡಾದಿಂದ ವೈದ್ಯಕೀಯ ಉಪಕರಣಗಳ ಹಸ್ತಾಂತರ
ಮಂಗಳೂರು, ಜೂನ್ 03, 2021: ಬ್ಯಾಂಕ್ ಆಫ್ ಬರೋಡಾದ ವತಿಯಿಂದ ಜಿಲ್ಲಾಡಳಿತಕ್ಕೆ ಕೊರೋನಾ ಸೋಂಕು ಚಿಕಿತ್ಸೆಗೆ ಅಗತ್ಯವಿರುವ ಗ್ಲುಕೋಮೀಟರ್, ಬಿಪಿ ಮೋನಿಟರ್, ಥರ್ಮೋಸ್ಕ್ಯಾನರ್, ಮಾಸ್ಕ್, ಹಾಗು ಸ್ಯಾನಿಟೈಸರ್ ಗಳನ್ನೊಳಗೊಂಡ ಒಟ್ಟು ರೂ.14.80 ಲಕ್ಷಗಳ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಲಾಯಿತು
ಬ್ಯಾಂಕ್ ಆಫ್ ಬರೋಡದ ಪ್ರಧಾನ ವ್ಯವಸ್ಥಾಪಕರು ಮತ್ತು ವಲಯ ಮುಖ್ಯಸ್ಥರಾದ ಗಾಯತ್ರಿ ಆರ್, ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಈ ಉಪಕರಣಗಳನ್ನು ಹಸ್ತಾಂತರಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾI ಕುಮಾರ್, ಉಪ ಪ್ರಧಾನ ವ್ಯವಸ್ಥಾಪಕ ಮತ್ತು ವಲಯ ಮುಖ್ಯಸ್ಥ ಗೋಪಾಲಕೃಷ್ಣ ಆರ್., ಮಂಗಳೂರು ಕ್ಷೇತ್ರೀಯ ಪ್ರಮುಖ ಕಿರಣ್ ರೆಡ್ಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜುಗಳಿಗೆ 15 ಕ್ಕೂ ಹೆಚ್ಚು ಜಿಲ್ಲೆಗಳಿಂದ ಕೊರೋನಾ ಸೋಂಕಿತರು ಅಲ್ಲದೇ ಇತರ ರೋಗಿಗಳು ಚಿಕಿತ್ಸೆಗೆಂದು ಬರುತ್ತಿದ್ದು, ಉತ್ತಮ ಚಿಕಿತ್ಸೆ ನೀಡುವುದರೊಂದಿಗೆ ಸ್ಪಂದಿಸುತ್ತಿದೆ ಅದರೊಂದಿಗೆ ಜಿಲ್ಲಾಡಳಿತವು ಸವಾಲುಗಳನ್ನು ಎದುರಿಸುವ ಸಂದರ್ಭದಲ್ಲಿಯೂ ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೊರೋನಾ ನಿಯಂತ್ರಣವಾಗಿರುವ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯೂ ಒಂದಾಗಿರುವುದು ಜಿಲ್ಲಾಡಳಿತಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದ ಅವರು ಜಿಲ್ಲೆಯ 225 ಗ್ರಾಮ ಪಂಚಾಯತ್ಗಳಲ್ಲಿಯೂ ಕಾರ್ಯಪಡೆಯನ್ನು ರಚನೆ ಮಾಡಿ ಮನೆ ಮನೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಣೆ ಮಾಡುವುದರೊಂದಿಗೆ ವೈದ್ಯಾಧಿಕಾರಿಗಳ ನಡೆ ಹಳ್ಳಿಯ ಕಡೆ ಎನ್ನುವ ಕಾರ್ಯಕ್ರಮದಲ್ಲಿ ಎಲ್ಲಾ ಮೆಡಿಕಲ್ ಕಾಲೇಜುಗಳಿಂದ ವೈದ್ಯರನ್ನು ಒಳಗೊಂಡ ತಂಡವು ಸಾರ್ವಜನಿಕರನ್ನು ಹಾಗೂ ಕೊರೋನಾ ಪೀಡಿತರನ್ನು ಭೇಟಿ ಮಾಡಿ ಸ್ವಾಬ್ ಟೆಸ್ಟ್ ಮಾಡಲು ಬ್ಯಾಂಕ್ ಆಫ್ ಬರೋಡಾದ ವತಿಯಿಂದ ನೀಡಲಾಗಿರುವ ವೈದ್ಯಕೀಯ ಕಿಟ್ಗಳು ತುಂಬಾ ಅನುಕೂಲವಾಗಿದೆ. ಇದರಿಂದ ಹೆಚ್ಚಿನ ಜನಸಾಮಾನ್ಯರಿಗೆ ಸದುಪಯೋಗವಾಗಲಿದೆ ಎಂದರು.