ಕೋವಿಡ್ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯ ಕಾರ್ಯ ಮಹತ್ವದ್ದು: ವಿ. ಪೊನ್ನುರಾಜ್

 ಕೋವಿಡ್ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯ ಕಾರ್ಯ ಮಹತ್ವದ್ದು: ವಿ. ಪೊನ್ನುರಾಜ್
Share this post

ಮಂಗಳೂರು, ಮೇ 24, 2021: ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ವೈದ್ಯಕೀಯ ಸಿಬ್ಬಂದಿಗಳು ವಿಳಂಬವಿಲ್ಲದೇ ಶೀಘ್ರದಲ್ಲಿ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸಿದಾಗ ಮಾತ್ರ ಕೋವಿಡ್ ಸೋಂಕು ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್ ತಿಳಿಸಿದರು.

ಅವರು ಇಂದು ನಗರದ ಜಿಲ್ಲಾ ಪಂಚಾಯತ್‍ನ ಕೆಸ್ವಾನ್ ವೀಡಿಯೋ ಕಾನ್ಫ್‍ರೆನ್ಸ್ ಹಾಲ್‍ನಲ್ಲಿ ಕೋವಿಡ್ -19 ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ದೈನಂದಿನ ಸ್ವ್ಯಾಬ್ ಸಂಗ್ರಹ, ಅವುಗಳ ರವಾನೆ, ಪರೀಕ್ಷೆಯ ಫಲಿತಾಂಶ ನಂತರದಲ್ಲಿ ಸೋಂಕು ದೃಢಪಟ್ಟವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಸ್ವ್ಯಾಬ್ ಸಂಗ್ರಹ, ಅವುಗಳ ಪರೀಕ್ಷೆಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡಿದಾಗ ಮಾತ್ರ ಸೋಂಕು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಈ ಕಾರ್ಯವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ತ್ವರಿತಗತಿಯಲ್ಲಿ ಕೈಗೊಳ್ಳಬೇಕು ಎಂದರು.

ಪ್ರತಿದಿನ ಸ್ವ್ಯಾಬ್ ಎಷ್ಟು ಸಂಗ್ರಹವಾಗುತ್ತಿದೆ, ಯಾವ ಯಾವ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಷ್ಟು ಸಂಗ್ರಹವಾಗುತ್ತಿದೆ, ಅವುಗಳ ಪರೀಕ್ಷೆ ಯಾವಾಗ ಆಗುತ್ತಿದೆ ಎಂಬ ಉಸ್ತುವಾರಿ ಕಾರ್ಯದರ್ಶಿಗಳ ಪ್ರಶ್ನೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮರ್ಪಕ ಉತ್ತರ ನೀಡದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ ಅವರು, ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿಖರ ಮಾಹಿತಿಯನ್ನು ಹೊಂದುವುದರೊಂದಿಗೆ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೆಳ ಹಂತದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗದವರು ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಮೇಲ್ವಿಚಾರಣೆಯನ್ನು ತಪ್ಪದೇ ಮಾಡಬೇಕು. ಕೆಲವೊಮ್ಮೆ ಸರಿಯಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಅವರುಗಳಿಗೆ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾರ್ಗದರ್ಶನ ನೀಡಬೇಕು ಎಂದರು.

ಸೋಂಕು ದೃಢಪಟ್ಟು ಗುಣಲಕ್ಷಣ ಹೊಂದಿಲ್ಲದ ಹಾಗೂ ಹೊಂದಿರುವ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು. ಅವಶ್ಯವಿದ್ದಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ವರ್ಗಾಯಿಸಬೇಕು, ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಆಪೇಕ್ಷಿಸಿದಲ್ಲಿ ಅವರಿಗೆ ಪ್ರತ್ಯೇಕವಾಗಿರಲು ಸೂಚನೆ ನೀಡುವುದರ ಜೊತೆಗೆ ವೈದ್ಯರು ಪ್ರತಿದಿನ ಅವರುಗಳ ಆರೋಗ್ಯದ ಸ್ಥಿತಿಗತಿಗಳನ್ನು ಪೋನ್ ಕರೆ ಮಾಡುವುದರೊಂದಿಗೆ ಮಾಹಿತಿ ಪಡೆದು ಸೂಕ್ತ ಚಿಕಿತ್ಸೆ ಹೊಂದಲು ಸಲಹೆ ನೀಡಬೇಕು ಎಂದು ಸೂಚಿಸಿದರು.

ಪ್ರತೀ ಗ್ರಾಮಗಳಲ್ಲಿ ಹಾಗೂ ವಾರ್ಡ್‍ಗಳಲ್ಲಿ ಸೋಂಕಿತರ ಸಂಪರ್ಕ ಹೊಂದಿದವರ ಗುರುತಿಸುವ ಕಾರ್ಯವನ್ನು ಶಾಲಾ ಶಿಕ್ಷಕಿಯರು ಮಾಡುತ್ತಿದ್ದು, ಇವುಗಳ ಮೇಲ್ವಿಚಾರಣೆಯನ್ನು ಪ್ರತೀದಿನ ತಹಶೀಲ್ದಾರರುಗಳು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಡಬೇಕು ಎಂದರು.

ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿಮಾತನಾಡಿ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಕೊರೋನಾ ಪರೀಕ್ಷೆಯನ್ನು ಮಾಡಲು ಮೊಬೈಲ್ ಸ್ವ್ಯಾಬ್ ಸಂಗ್ರಹ ವಾಹನಗಳನ್ನು ನಿಯೋಜಿಸಲಾಗಿದೆ. ಕೆಲವೊಮ್ಮೆ ಕೊರೋನಾ ಪರೀಕ್ಷೆಗೆ ಬರಲು ಆಗದೆ ಇದ್ದವರನ್ನು ಅವರ ಮನೆಗಳಿಗೆ ಹೋಗಿ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2 ರಿಂದ 5 ರ ವರೆಗೆ ಸೋಂಕು ಹೊಂದಿರುವ ಪ್ರದೇಶಗಳಿದ್ದಲ್ಲಿ ಅವುಗಳನ್ನು ಮೈಕ್ರೋಕಂಟೈನ್ಮೆಂಟ್ ಝೋನ್‍ಗಳೆಂದು ಘೋಷಿಸಬೇಕು ಎಂದ ಅವರು, ಅಲ್ಲಿನಜನರಿಗೆ ಅವಶ್ಯ ವಸ್ತುಗಳ ಪೂರೈಕೆಯನ್ನು ಮಾಡಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಸರ್ಕಾರ ಹೊರ ನೀಡಿಸಿರುವ ಮಾರ್ಗಸೂಚಿಗಳನ್ನು ವೈದ್ಯಕೀಯ ಸಿಬ್ಬಂದಿ ವರ್ಗದವರು ತಪ್ಪದೇ ಪಾಲಿಸಬೇಕು ಎಂದ ಅವರು, ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆಗೆ ಜನರು ಖಾಸಗಿ ಆಸ್ಪತ್ರೆಗಳಿಗೆ ಬಂದಾಗ ಆರೋಗ್ಯ ಮಿತ್ರರು ಅವರಿಗೆ ಸಹಕಾರ ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಿಶೋರ್ ಕುಮಾರ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

    

Subscribe to our newsletter!

Other related posts

error: Content is protected !!