ವೆನ್ಲಾಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಕಾಮಗಾರಿ ನಾಳೆಯಿಂದ ಪ್ರಾರಂಭ

 ವೆನ್ಲಾಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಕಾಮಗಾರಿ ನಾಳೆಯಿಂದ ಪ್ರಾರಂಭ
Share this post
ವೆನ್ಲಾಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಕಾಮಗಾರಿ ನಾಳೆಯಿಂದ ಪ್ರಾರಂಭ

ಮಂಗಳೂರು, ಮೇ 19, 2021: ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ₹1.37 ಕೋಟಿ ವೆಚ್ಚದಲ್ಲಿ 500 ಎಲ್.ಪಿ.ಎಂ ಸಾಮರ್ಥ್ಯದ ಆನ್ ಸೈಟ್ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಕಾಮಗಾರಿ ನಾಳೆಯಿಂದ ಪ್ರಾರಂಭವಾಗಲಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.

ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣದ ಸ್ಥಳ ವೀಕ್ಷಣೆ ನಡೆಸಿ ಮಾತನಾಡಿದ ಶಾಸಕ ಕಾಮತ್, ಪ್ರಾಯೋಗಿಕವಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ 10 ಜಿಲ್ಲಾ ಆಸ್ಪತ್ರೆಗಳಲ್ಲಿ ಪಿಎಸ್ಎ ತಂತ್ರಜ್ಞಾನವುಳ್ಳ 500 ಎಲ್.ಪಿ.ಎಂ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕ ಅಳವಡಿಸುವ‌ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ನಾಳೆಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕದ ನಿರ್ಮಾಣ ಕಾಮಗಾರಿಗಳು ಪ್ರಾರಂಭವಾಗಲಿದೆ ಎಂದರು.

“ಈಗಾಗಲೇ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಯತ್ನದಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ.ಆರ್.ಪಿ.ಎಲ್‌ ಸಂಸ್ಥೆಯ ಸಿಆರ್ ಎಫ್ ನಿಧಿಯಲ್ಲಿ 2 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಹಾಗಾಗಿ ಇನ್ನು ಕೆಲವೇ ದಿನಗಳಲ್ಲಿ 2 ಆಕ್ಸಿಜನ್ ಪ್ಲಾಂಟ್`ಗಳೂ ಕೂಡ ಜನರ ಸೇವೆಗೆ ಲಭ್ಯವಾಗಲಿದೆ,” ಎಂದರು.

ಈ ಹಿಂದೆ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತಿನಿತ್ಯ 2.5 ಕೆ.ಎಲ್ ಆಕ್ಸಿಜನ್ ಸಾಕಾಗುತಿತ್ತು. ಆದರೆ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದ್ದು ಸರಿಸುಮಾರು 5 ಕೆ.ಎಲ್ ಆಕ್ಸಿಜನ್ ಬೇಡಿಕೆಯಿದೆ ಎಂದು ಶಾಸಕ ಕಾಮತ್ ಹೇಳಿದರು.

ಸದ್ಯ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೀಡುತ್ತಿರುವ ಆಮ್ಲಜನಕ ನಿರ್ಮಾಣ ಘಟಕದಿಂದ ಪ್ರತಿನಿತ್ಯ 1 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸಬಹುದು. ಇದರಿಂದಾಗಿ ಮೆಡಿಕಲ್ ಆಕ್ಸಿಜನ್ ಸರಬರಾಜುದಾರರ ಮೇಲೆ ಅವಲಂಬಿತವಾಗುವುದನ್ನು ಕಡಿಮೆಗೊಳಿಸಬಹುದಾಗಿದೆ ಎಂದರು.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಸಂಸದ ನಳಿನ್ ಕುಮಾರ್ ಗೆ ಧನ್ಯವಾದ ಅರ್ಪಿಸಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್, ಮಂಗಳೂರು ಮಹಾನಗರ ಪಾಲಿಕೆ ಮುಖ್ಯ ಸಚೇತಕ ಸುಧೀರ್‌ ಶೆಟ್ಟಿ ಕಣ್ಣೂರು, ಪಾಲಿಕೆ ನಾಮನಿರ್ದೇಶಿತ ಸದಸ್ಯ ರಾಧಾಕೃಷ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಶೇಣವ, ಮುಖಂಡರಾದ ಸಚಿನ್ ರಾಜ್ ರೈ, ಮೋಹನ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!