ಮದುವೆಗೆ 40 ಮಂದಿಗಷ್ಟೇ ಅವಕಾಶ: ಜಿ. ಜಗದೀಶ್

 ಮದುವೆಗೆ 40 ಮಂದಿಗಷ್ಟೇ ಅವಕಾಶ: ಜಿ. ಜಗದೀಶ್
Share this post

ಉಡುಪಿ, ಮೇ 10, 2021: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ 10 ರ ಬೆಳಗ್ಗೆ 6 ರಿಂದ ಮೇ 24 ರ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ವಿಧಿಸಲಾಗಿದ್ದು, ಸರಕಾರದ ಆದೇಶದನ್ವಯ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ಆದೇಶದಲ್ಲಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಈ ಕೆಳಗಿನಂತೆ ಆದೇಶ ಹೊರಡಿಸಿರುತ್ತಾರೆ.

ಉಕ್ಕಿನ ಉದ್ಯಮಕ್ಕೆ ಮಾರಾಟ ಮಾಡುವ ಕಬ್ಬಿಣದ ಅದಿರು ಗಣಿಗಾರಿಕೆಗೆ ಹಾಗೂ ಸಿಮೆಂಟ್ ಉದ್ಯಮದಲ್ಲಿ ಬಳಸುವ ಸುಣ್ಣದ ಕಲ್ಲು ಗಣಿಗಾರಿಕೆಯ ಕೈಗಾರಿಕೆಗಳು ಮತ್ತು ಕೈಗಾರಿಕ ಸಂಸ್ಥೆಗಳು /ಉತ್ಪಾದನಾ ಘಟಕಗಳು (ಸರ್ಕಾರಿ ಮತ್ತು ಖಾಸಗಿ) ಕಂಟೈನ್‌ಮೆಂಟ್ ವಲಯದ ಹೊರಗಿನ ಪ್ರದೇಶಗಳಲ್ಲಿ ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ.

ಈಗಾಗಲೇ ನಿಗದಿಯಾಗಿರುವ ಮದುವೆಯನ್ನು ಸರಳವಾಗಿ ಆಯಾ ಮನೆಗಳಲ್ಲಿ ಕುಟುಂಬದ ಸದಸ್ಯರು, ಸಂಬಂಧಿಕರು ಸೇರಿದಂತೆ ಒಟ್ಟು 40 ಜನರಿಗೆ ಅನುಮತಿ ನೀಡಲಾಗಿದೆ.

ವಿವಾಹಗಳನ್ನು ಆಯೋಜಿಸುವವರು ವಿವಾಹ ಆಮಂತ್ರಣ ಪತ್ರ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳೊಂದಿಗೆ ಸಹಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ತಹಶೀಲ್ದಾರ್ ಅವರಿಗೆ ಸಲ್ಲಿಸಬೇಕು. ಅರ್ಜಿಯ ಸ್ವೀಕೃತಿಯ ಮೇರೆಗೆ, ತಹಶೀಲ್ದಾರರು ಪ್ರತಿ ಮದುವೆ ಕಾರ್ಯಕ್ರಮಕ್ಕೆ 40 ಪಾಸ್‌ಗಳನ್ನು ನೀಡಬೇಕು. ಪಾಸ್ ಹೊಂದಿರುವ ಜನರಿಗೆ ಮಾತ್ರ ಮದುವೆ ಕಾರ್ಯಕ್ಕೆ ಹಾಜರಾಗಲು ಅವಕಾಶವಿದ್ದು, ಪಾಸ್ ಅನ್ನು ವರ್ಗಾಯಿಸಲು ಅವಕಾಶವಿರುವುದಿಲ್ಲ.

ಮದುವೆ ಕಾರ್ಯಕ್ಕೆ ಹಾಜರಾಗುವ ಜನರು ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಪಾಸ್‌ಗಳನ್ನು ಅಧಿಕೃತ ಪರಿಶೀಲನಾ ಅಧಿಕಾರಿಗಳಿಗೆ ತೋರಿಸಬೇಕು.

ಮೇಲಿನ ಅದೇಶಗಳನ್ನು ಪಾಲಿಸದೇ ಇದ್ದವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ವಿಪತ್ತು ನಿರ್ವಹಣಾ ಕಾಯ್ದೆ 2005, ಕರ್ನಾಟಕ ಎಪಿಡಮಿಕ್ ಡಿಸೀಸಸ್ ಆ್ಯಕ್ಟ್ 2020 ಮತ್ತು ಐಪಿಸಿ ಸೆಕ್ಷನ್ 188 ಪ್ರಕಾರ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Subscribe to our newsletter!

Other related posts

error: Content is protected !!