ನಗರಗಳಿಂದ ಬಂದವರು ನರೇಗಾದಡಿ ಕೆಲಸ ಮಾಡಬಹುದು: ಪ್ರಿಯಾಂಗಾ ಎಮ್
ಕಾರವಾರ, ಮೇ 06, 2021: ಕರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಾನಗರಗಳಿಂದ ಯಾರು ಮರಳಿ ಬರುತ್ತಿದ್ದಾರೋ ಅವರು ಮೊದಲು ಪ್ರತ್ಯೇಕಾವಾಗಿದ್ದು, ನಂತರದಲ್ಲಿ ಗ್ರಾಮ ಪಂಚಾಯತನಲ್ಲಿ ಕೆಲಸದ ಬೇಡಿಕೆ ಸಲ್ಲಿಸಿ ಉದ್ಯೋಗ ಖಾತ್ರಿಯಡಿ ಕೆಲಸ ಪಡೆಯಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪ್ರಿಯಾಂಗಾ ಎಮ್ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಜನರಿಗೆ ನರೇಗಾದ ವಿವಿಧ ಅಭಿಯಾನಗಳಡಿ ಕೆಲಸ ದೊರೆಯಲಿದ್ದು, ಆಯಾ ಗ್ರಾಮಗಳಲ್ಲೇ ಕೆಲಸ ಮತ್ತು ಕೂಲಿ ಪಡೆಯಬಹುದಾಗಿದೆ. ಯಾರು ಉದ್ಯೋಗವಿಲ್ಲವೆಂದು ಹತಾಶರಾಗುವುದು ಬೇಡ. ಕೃಷಿ ಕಾರ್ಮಿಕರು, ಕೂಲಿಕಾರರು, ಗ್ರಾಮೀಣ ಪ್ರದೇಶದ ಜನರು ಕೆಲಸಕ್ಕೆ ಚಿಂತಿಸಬೇಕಾಗಿಲ್ಲ. ಲಾಕ್ಡೌನ್ನಲ್ಲಿ ನರೇಗಾ ಕೆಲಸಕ್ಕೆ ಯಾವುದೇ ನಿರ್ಬಂಧವಿಲ್ಲ. ಹೀಗಾಗಿ ಯಾವುದೇ ಹಿಂಜರಿಕೆಯಿಲ್ಲದೆ ಕೆಲಸದಲ್ಲಿ ತೊಡಗಬಹುದಾಗಿದೆ ಎಂದಿದ್ದಾರೆ.
ಆಯಾ ಗ್ರಾಮ ಪಂಚಾಯತಿಯಲ್ಲಿಯೇ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಲಾಗುತ್ತಿದ್ದು, ಕೋವಿಡ್ ಹಿನ್ನಲೆಯಲ್ಲಿ ಮಹಾನಗರಗಳಿಂದ ಮನೆಗಳಿಗೆ ಮರಳಿದವರಿಗೂ ಸಹ ಕೆಲಸ ನೀಡಲಾಗುತ್ತಿದೆ. ಪ್ರತಿ ಕುಟುಂಬಕ್ಕೆ ನೂರು ದಿನಗಳ ಕೆಲಸ, ದಿನಕ್ಕೆ 289 ರೂ ಮತ್ತು ಸಲಕರಣೆ ವೆಚ್ಚ 10 ರೂ ಸೇರಿದಂತೆ ಒಟ್ಟು 299 ರೂಗಳನ್ನು ನೀಡಲಾಗುವುದು.
ಜಿಲ್ಲೆಯಲ್ಲಿ ಪ್ರಸ್ತುತ ಬೇಸಿಗೆಯಲ್ಲಿ ಜನರಿಗೆ ನಿರಂತರ ಕೆಲಸ ನೀಡುವ ‘ದುಡಿಯೋಣ ಬಾ ಅಭಿಯಾನ’ ಹಾಗೂ ‘ಜಲಶಕ್ತಿ ಅಭಿಯಾನ ಮತ್ತು ಬದುಕು ನಿರ್ಮಾಣ ಅಭಿಯಾನಗಳು ನಡೆಯುತ್ತಿವೆ.
ಈ ಅಭಿಯಾನಗಳಡಿ ಗ್ರಾಮೀಣ ಭಾಗದ ಜನರಿಗೆ ವಿಶೇಷವಾಗಿ ಕೋವಿಡ್ನಿಂದಾಗಿ ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ಸ್ವಂತ ಗ್ರಾಮಕ್ಕೆ ಮರಳಿದವರಿಗೆ ತಮ್ಮೂರಲ್ಲೇ ಕೆಲಸ ನೀಡಲಾಗುತ್ತದೆ.
ಜಿಲ್ಲೆಯ ಬಹುತೇಕ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ನರೇಗಾದಡಿ ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಇಲ್ಲಿ ಗಂಡು-ಹೆಣ್ಣಿಗೆ ಸಮಾನ ಕೂಲಿಯಿರುತ್ತದೆ. ಕೆಲಸದ ಅಗತ್ಯವಿರುವವರು ಆಯಾ ಗ್ರಾಮ ಪಂಚಾಯತಯನ್ನು ಸಂಪರ್ಕಿಸಿ ಉದ್ಯೋಗ ಚೀಟಿ ಪಡೆದುಕೊಂಡು ಕೆಲಸ ಪಡೆಯಬಹುದು ಎಂದಿದ್ದಾರೆ.
ರೈತರಿಗೆ ಹಲವಾರು ಕಾಮಗಾರಿಗಳು:
ಜಿಲ್ಲೆಯಲ್ಲಿ ರೈತರು ವೈಯಕ್ತಿಕವಾಗಿ ಕೃಷಿ ಹೊಂಡ, ತೆರೆದ ಬಾವಿ ನಿರ್ಮಾಣ, ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದು. ದನದ ಕೊಟ್ಟಿಗೆ, ಕುರಿ ಶೆಡ್, ಕೋಳಿ ಶೆಡ್, ನೆಲ ಸಮತಟ್ಟು, ಹೊಸ ತೋಟ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ.ಕಲ್ಯಾಣಿಗಳ, ಕೆರೆಗಳ ಹೂಳೆತ್ತುವುದು. ಹೊಸ ಕೆರೆಗಳ ನಿರ್ಮಾಣ, ಈಗಿರುವ ಕೆರೆಗಳ ದುರಸ್ಥಿ, ಪುನಶ್ಚೇತನ ಸೇರಿ ಅನೇಕ ಕಾಮಗಾರಿಗಳನ್ನು ನರೇಗಾದಡಿ ಮಾಡಬಹುದಾಗಿದೆ ಎಂದು ಸಿಇಒ ಅವರು ತಿಳಿಸಿದ್ದಾರೆ.