ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ: ಜಿ.ಜಗದೀಶ್

 ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ: ಜಿ.ಜಗದೀಶ್
Share this post

ಉಡುಪಿ, ಎಪ್ರಿಲ್ 27, 2021: ಕೋವಿಡ್ 2 ನೇ ಅಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 27 ರಿಂದ ಮೇ 12 ರ ವರೆಗೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು. ಮಾರ್ಗಸೂಚಿಗಳನ್ನು ಕಾಟಾಚಾರಕ್ಕೆ ಅನುಷ್ಠಾನ ಮಾಡುವ ಅಧಿಕಾರಿಗಳ ವಿರುದ್ಧ ಎಪಿಡಮಿಕ್ ಕಾಯಿದೆ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು.

ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ, ಜಿಲ್ಲೆಯಲ್ಲಿ ಕೋವಿಡ್ ಉಲ್ಬಣವಾಗುವುದನ್ನು ನಿಯಂತ್ರಿಸಬೇಕು. ರೈಲು ಮತ್ತು ವಿಮಾನ ಪ್ರಯಾಣ ಮಾಡುವವರನ್ನು ಅವರು ಹೊಂದಿರುವ ಅಧಿಕೃತ ಟಿಕೆಟ್ ಆಧಾರದಲ್ಲಿ ಸಂಚಾರಕ್ಕೆ ಅನುಮತಿ ನೀಡಿ, ತುರ್ತು ಆರೋಗ್ಯ ಸಮಸ್ಯೆಯಿರುವ ರೋಗಿಗಳು ಆಟೋ, ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳಲ್ಲಿ ಸಂಚರಿಸಲು ಅನುಮತಿ ಇದೆ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಹೋಂ ಡೆಲಿವರಿಗೆ ಮಾತ್ರ ಅವಕಾಶ ನೀಡಿ ಎಂದರು.

Also read: Netizens fume at Udupi DC’s ‘callousness’

ಅವಶ್ಯಕ ಮತ್ತು ತುರ್ತು ಸೇವೆ ಒದಗಿಸುವ ಸಿಬ್ಬಂದಿಗಳಿಗೆ ಅವರ ಗುರುತಿನ ಚೀಟಿ ಆಧಾರದಲ್ಲಿ ಸಂಚರಿಸಲು ಅವಕಾಶ ಇದೆ ಹಾಗೂ ಗಾರ್ಮೆಂಟ್ಸ್ ಹೊರತುಪಡಿಸಿ ಎಲ್ಲಾ ಕೈಗಾರಿಕೆಗಳಲ್ಲಿ ಹಾಗೂ  ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ಸೂಕ್ತ ಗುರುತಿನ ಚೀಟಿ ಹೊಂದಿ ಸಂಚರಿಸಲು ಅವಕಾಶ ಇದೆ. ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮದವರು ತಮ್ಮ ಗುರುತಿನ ಚೀಟಿಯೊಂದಿಗೆ  ಸಂಚರಿಸಬಹುದು. ಸರಕು ಸಾಗಾಣಿಕೆ ವಾಹನಗಳು ಲೋಡ್ ಮತ್ತು ಅನ್‌ಲೋಡ್ ಮಾಡಿ ಸಂಚರಿಸಲು ಯಾವುದೇ ನಿರ್ಭಂಧಗಳಿಲ್ಲ. ಅಂತಹ ವಾಹನಗಳನ್ನು ತಡೆಯಬಾರದು ಎಂದು ಡಿಸಿ ಹೆಳಿದರು.

ದಿನಬಳಕೆಯ ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಗ್ಗೆ 6 ರಿಂದ 10 ರ ವರೆಗೆ ಅವಕಾಶವಿದ್ದು, ಸಾರ್ವಜನಿಕರು ತಮ್ಮ ಮನೆಯ ಸಮೀಪದ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಬೇಕು. ಅನಾವಶ್ಯಕವಾಗಿ  ಸಂಚರಿಸಬಾರದು. ಕೋವಿಡ್ ಲಸಿಕೆ ಪಡೆಯುವವರು ತಮ್ಮ ಸಮೀಪದ ಆಸ್ಪತ್ರೆಗಳಿಗೆ ಮಾತ್ರ ತೆರಳಿ, ಲಸಿಕೆ ಪಡೆಯಲು ಅವಕಾಶವಿದೆ. ಲಸಿಕೆ ಪಡೆಯುವ ಉದ್ದೇಶದಿಂದ ಅನಗತ್ಯ ಸಂಚಾರ ಮಾಡುವಂತಿಲ್ಲ. ಲಸಿಕೆ ನೀಡುವ ಕೇಂದ್ರಗಳಲ್ಲಿ ಸೂಕ್ತ ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ನೀಡಲು ವ್ಯವಸ್ಥೆ ಮಾಡುವಂತೆ ಡಿಸಿ ಸೂಚನೆ ನೀಡಿದರು.

ಕಟ್ಟಡ ನಿರ್ಮಾಣ ಚಟುವಟಿಕೆಗೆ ಅವಕಾಶವಿದ್ದು, ಕಾರ್ಮಿಕರಿಗೆ ಸಂಬಂಧಟ್ಟ ನಿರ್ಮಾಣ ಸಂಸ್ಥೆ ಅಥವಾ ಮಾಲೀಕರು ಸೂಕ್ತ ಗುರುತಿನ ಚೀಟಿ ಒದಗಿಸಬೇಕು. ಮೀನುಗಾರಿಕೆಯನ್ನು ನಿಗಧಿತ ಅವಧಿಯೊಳಗೆ ಮಾಡಲು ಕ್ರಮ ಕೈಗೊಳ್ಳಬೇಕು. ಕೃಷಿ ಚಟುವಟಿಕೆ ನಡೆಸಲು ನಿರ್ಬಂಧಗಳಿಲ್ಲ.

ಮದುವೆ ಕಾರ್ಯಕ್ರಮಕ್ಕೆ 50 ಮಂದಿ, ಶವ ಸಂಸ್ಕಾರಕ್ಕೆ 5 ಮಂದಿ ಮಾತ್ರ ಭಾಗವಹಿಸಲು ಅವಕಾಶವಿದೆ. ಮೊನ್ನೆ ನಡೆದ ವಿವಾಹ ಕಾರ್ಯಕ್ರಮಗಳ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಂಡಿದ್ದಾರೆ. ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಜಿ.ಜಗದೀಶ್ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಬಾಗಾಧಿಕಾರಿ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!