1 ರಿಂದ 19 ವರ್ಷದ ಪ್ರತಿಯೊಬ್ಬರಿಗೂ ಉಚಿತ ಜಂತುಹುಳು ನಿವಾರಕ ಮಾತ್ರೆಗಳ ವಿತರಣೆ
ಉಡುಪಿ, ಏಪ್ರಿಲ್ 15, 2021: ಜಿಲ್ಲೆಯಾದ್ಯಂತ 1 ರಿಂದ 19 ವರ್ಷದೊಳಗಿನ ಪ್ರತಿಯೊಬ್ಬರಿಗೂ ಜಂತು ಹುಳು ಅಲ್ಬೆಂಡೋಜೋಲ್ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ.
ಏಪ್ರಿಲ್ 16 ರಿಂದ 30 ರವರೆಗೆ ರಾಷ್ಟೀಯ ಜಂತುಹುಳು ನಿವಾರಣ ಯೋಜನೆಯಡಿಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ತಮ್ಮ ಸಮ್ಮುಖದಲ್ಲಿ ಮಕ್ಕಳಿಗೆ ಮಾತ್ರೆಗಳನ್ನು ನೀಡುವುದರೊಂದಿಗೆ ಸೇವನೆ ಮಾಡಿಸಲಿದ್ದಾರೆ.
1 ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ, 2 ರಿಂದ 9 ವರ್ಷದೊಳಗಿನ ಮಕ್ಕಳಿಗೆ ಒಂದು ಮಾತ್ರೆ ನೀಡಲಾಗುವುದು. ಮಕ್ಕಳು ಚಿಕ್ಕವರಿದ್ದಲ್ಲಿ ಮಾತ್ರೆಯನ್ನು ಚಮಚದಲ್ಲಿ ಪುಡಿ ಮಾಡಿ ನೀರಿನಲ್ಲಿ ಅಥವಾ ಚೀಪಿ ಸೇವಿಸಬೇಕು. ಮನೆಯವರು ಮಕ್ಕಳಿಗೆ ಮಾತ್ರೆ ನೀಡಲು ಅನುಕೂಲವಾಗುವಂತೆ ಶುದ್ಧವಾದ ಕುಡಿಯುವ ನೀರು ಮತ್ತು ಚಮಚವನ್ನು ಮಾತ್ರೆ ವಿತರಣೆ ಸಂದರ್ಭದಲ್ಲಿ ಇಟ್ಟುಕೊಂಡು ಸಹಕರಿಸಬೇಕು. ಸಣ್ಣ ಪುಟ್ಟ ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆಯಂತಹ ಸಮಸ್ಯೆ ಇದ್ದ ಮಕ್ಕಳಿಗೆ ಮಾತ್ರೆಯನ್ನು ನೀಡಬಾರದು. ಅಲ್ಲದೇ ಮಕ್ಕಳು ಬೇರೆ ಯಾವುದೇ ಔಷಧಿ ಸೇವಿಸುತ್ತಿದ್ದರೆ ವೈದ್ಯರ ಸಲಹೆ ಪಡೆದು ನಂತರ ಅಲ್ಬೆಂಡೋಜೋಲ್ ಮಾತ್ರೆಯನ್ನು ಸೇವಿಸಬೇಕು.
ಜಿಲ್ಲೆಯಲ್ಲಿ 1 ರಿಂದ 19 ವರ್ಷದೊಳಗಿನ 2,71,000 ಮಕ್ಕಳಿಗೆ ಜಂತುಹುಳ ಮಾತ್ರೆ ವಿತರಿಸಲು ಗುರುತಿಸಲಾಗಿದ್ದು, ಮಾತ್ರೆ ವಿತರಿಸುವ ಸಂದರ್ಭದಲ್ಲಿ ಸಿಬ್ಬಂದಿಗಳು ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಜಂತುಹುಳು ಭಾದೆಯಿಂದಾಗಿ ಮಕ್ಕಳು ಹೆಚ್ಚಾಗಿ ರೋಗಗ್ರಸ್ಥರಾಗಿ ಶಾಲೆಗಳಿಗೆ ಗೈರು ಹಾಜರಾತಿಯಾಗುವುದು ಅಥವಾ ತರಗತಿಯಲ್ಲಿ ಪಾಠದ ಬಗ್ಗೆ ಏಕಾಗ್ರತೆ ನೀಡಲು ವಿಫಲರಾಗುವುದರ ಜೊತೆಗೆ ಮಕ್ಕಳ ಶಾರೀರಿಕ ಹಾಗೂ ಬೌದ್ಧಿಕ ಬೆಳವಣಿಗೆ ಕುಂಠಿತವಾಗಿ ಭವಿಷ್ಯದಲ್ಲಿ ಅವರ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುವ ಸಾದ್ಯತೆ ಇರುತ್ತದೆ.
ಜಂತುಹುಳು ಬಾಧೆಯು ನೈರ್ಮಲ್ಯತೆಯ ಕೊರತೆ ಹಾಗೂ ವೈಯಕ್ತಿಕ ಶುಚಿತ್ವದ ಕೊರತೆಯಿಂದ, ಜಂತುಹುಳು ಸೋಂಕಿನ ಮಣ್ಣನ್ನು ಸ್ಪರ್ಶಿಸುವುದರಿಂದ ಉಂಟಾಗುತ್ತದೆ.
ಜಂತುಹುಳು ಬಾಧೆಯ ಲಕ್ಷಣಗಳು: ಯಾವ ಮಕ್ಕಳಲ್ಲಿ ಸಂಖ್ಯೆ ಹೆಚ್ಚಿದೆಯೋ, ಆ ಮಕ್ಕಳಲ್ಲಿ ಹೊಟ್ಟೆನೋವು, ಭೇದಿ, ಹಸಿವಿಲ್ಲದಿರುವುದು ಹಾಗೂ ಸುಸ್ತು ಇಂತಹ ಲಕ್ಷಣಗಳು ಕಂಡುಬರುತ್ತವೆ. ಜಂತುಹುಳು ಸಂಖ್ಯೆ ಕಡಿಮೆ ಇದ್ದವರಲ್ಲಿ ಯಾವುದೇ ತೊಂದರೆಗಳು ಕಾಣಿಸದಿರಬಹುದು.
ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ ಶುಚಿಯಾಗಿಡುವುದು, ಊಟ/ತಿಂಡಿ ಮಾಡುವ ಮೊದಲು ಹಾಗೂ ಶೌಚಾಲಯ ಬಳಸಿದ ನಂತರ ತಪ್ಪದೇ ಕೈಗಳನ್ನು ಸಾಬೂನಿನಿಂದ ತೊಳೆಯುವುದು, ಆಹಾರ ಪದಾರ್ಥಗಳನ್ನು ಮುಚ್ಚಿಡುವುದು, ಶುದ್ಧೀಕರಿಸಿದ ನೀರನ್ನೇ ಕುಡಿಯುವುದು, ಹಣ್ಣು ಹಂಪಲು, ತರಕಾರಿಗಳನ್ನು ಉಪಯೋಗಿಸುವ ಮುನ್ನ ಶುದ್ಧ ನೀರಿನಿಂದ ತೊಳೆಯುವುದು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು, ಮಲ ವಿಸರ್ಜನೆಗೆ ಶೌಚಾಲಯವನ್ನೇ ಬಳಸುವುದು, ನಡೆಯುವಾಗ ಪಾದರಕ್ಷೆಗಳನ್ನು ಬಳಸುವುದರಿಂದ ಜಂತುಹುಳು ಭಾದೆಯಿಂದ ರಕ್ಷಿಸಿಕೊಳ್ಳಬಹುದಾಗಿದೆ.
ಜಂತುಹುಳು ಭಾದೆ ನಿವಾರಣೆಯಿಂದ ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟುವುದು, ಪೌಷ್ಟಿಕತೆಯಲ್ಲಿ ಸುಧಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಏಕಾಗ್ರತೆ, ಕಲಿಕೆಯ ಶಕ್ತಿ ಸುಧಾರಿಸಲಿದೆ.