ಶಸ್ತ್ರಾಸ್ತ್ರಗಳ ಠೇವಣಿ : ಜಿಲ್ಲಾಧಿಕಾರಿ ಆದೇಶ
ಮಂಗಳೂರು, ಮಾರ್ಚ್ 25, 2021: ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ರಾಜ್ಯದಲ್ಲಿ ಮೇ -2021 ರ ಮಾಹೆಯವರೆಗೆ ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯತಿಗಳಿಗೆ ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ಅಥವಾ ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿರುತ್ತದೆ.
ಅದರಂತೆ ಜಿಲ್ಲೆಯಲ್ಲಿ ಮಾರ್ಚ್ 29 ರಂದು ಬಂಟ್ವಾಳ ತಾಲೂಕಿನ ಮಾಣಿಲ ಮತ್ತು ಪುದು ಗ್ರಾಮ ಪಂಚಾಯತ್ ಹಾಗೂ ಬೆಳ್ತಂಗಡಿ ತಾಲೂಕಿನ ವೇಣೂರು, ಆರಂಬೋಡಿ ಮತ್ತು ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತದಾನ ನಡೆಯಲಿದೆ.
ಈ ಮೇಲ್ಕಂಡ ವ್ಯಾಪ್ತಿಯಲ್ಲಿ ಬೆಳೆ ರಕ್ಷಣೆಗಾಗಿ ಮತ್ತು ಆತ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಎಲ್ಲಾ ಪರವಾನಿಗೆದಾರರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಮಾರ್ಚ್ 24 ರಿಂದ 28 ರವರೆಗೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ನಮೂನೆ ನಂಬ್ರ 8ರ ಪರವಾನಿಗೆ ಹೊಂದಿರುವ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿಗಳಲ್ಲಿ ಅಥವಾ ಹತ್ತಿರದ ಪೊಲೀಸ್ ಠಾಣೆಗಳಲ್ಲಿ ಠೇವಣಿಯಲ್ಲಿರಿಸಲು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.
2020ನೇ ಸಾಲಿನ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿ ಪ್ರತಿ ತಾಲೂಕುಗಳಲ್ಲಿ ಸ್ಕ್ರೀನಿಂಗ್ ಸಮಿತಿಯನ್ನು ರಚಿಸಲಾಗಿದ್ದು, ಪರವಾನಿಗೆದಾರರಿಗೆ ಬೆಳೆ/ ಆತ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರದ ತೀರಾ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟವರು ಪೂರಕ ದಾಖಲೆಗಳೊಂದಿಗೆ ಸಮಿತಿಗೆ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಹಾಗೂ ಠೇವಣಿ ಇಡಲಾಗುವ ಶಸ್ತ್ರಾಸ್ತ್ರಗಳನ್ನು ಏಪ್ರಿಲ್ 1 ರಿಂದ ಪರವಾನಿಗೆದಾರರು ಹಿಂದಕ್ಕೆ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.