ಮೀನುಗಾರರ ಆದಾಯ ದ್ವಿಗುಣಕ್ಕಾಗಿ ಮೀನು ಕೃಷಿಕರಿಗೆ ಹೆಚ್ಚಿನ ಆದ್ಯತೆ
ಕಾರವಾರ, ಮಾರ್ಚ್ 25, 2021: ಮೀನುಗಾರರ ಆದಾಯ ದ್ವಿಗುಣಗೊಳಿಸುವ ದಿಸೆಯಲ್ಲಿ ಜಿಲ್ಲೆಯಲ್ಲಿರುವ ಅಳಿವೆ ಹಾಗೂತೀರ ಪ್ರದೇಶಗಳಲ್ಲಿ ಮತ್ತುಸಮುದ್ರ ನೀರಿನಲ್ಲಿ ಪಂಜರ ಮೀನು ಕೃಷಿಕರಿಗೆ ಭಾರತೀಯ ಕೃಷಿ ಸಂಶೋಧನಾ ಪರಿಷತ್, ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಕಾರವಾರ ಪ್ರಾದೇಶಿಕ ಕೇಂದ್ರವು ಹೆಚ್ಚಿನ ಆದ್ಯತೆ ನೀಡುತ್ತಿದೆ.
ಪಂಜರ ಕೃಷಿಯು ಮೀನುಗಳನ್ನು ಮತ್ತು ಚಿಪ್ಪು ಮೀನುಗಳನ್ನು ಅವುಗಳ ನೈಸರ್ಗಿಕ ವಾತಾವರಣದಲ್ಲಿಒಂದು ಸುತ್ತುವರಿಯಲ್ಪಟ್ಟ ಸ್ಥಳದಲ್ಲಿ ಬೆಳೆಸುವ ಪದ್ಧತಿಯಾಗಿದೆ. ಮರಿಉತ್ಪಾದನಾ ಕೇಂದ್ರಗಳಿಂದ ಅಥವಾ ನೈಸರ್ಗಿಕವಾಗಿ ಮರಿಗಳನ್ನು ಸಂಗ್ರಹಿಸಿ ಅಳಿವೆ ಹಾಗೂ ತೀರ ಪ್ರದೇಶಗಳಲ್ಲಿ ಮತ್ತು ಸಮುದ್ರ ನೀರಿನಲ್ಲಿ ಕೃಷಿ ಕೈಗೊಳ್ಳಬಹುದಾಗಿದೆ.
ಎಚ್.ಡಿ.ಪಿ.ಇ. ಅಥವಾಜಿ.ಆಯ್. ಕಬ್ಬಿಣ ಬಳಸಿಕೊಂಡು ಸಾಮಾನ್ಯವಾಗಿ ಆಯತಾಕಾರ, ಚೌಕಾಕಾರದ ಪಂಜರದ ಚೌಕಟ್ಟನ್ನು ಅಳಿವೆ ಮತ್ತುತೀರ ಪ್ರದೇಶಗಳಲ್ಲಿ ಹಾಗೂ ವೃತ್ತಾಕಾರದ ಪಂಜರದ ಚೌಕಟ್ಟನ್ನುಸಮುದ್ರದ ನೀರಿನಲ್ಲಿ ನಿರ್ಮಿಸಿ ಈ ಕೃಷಿ ಮಾಡಲಾಗುತ್ತಿದೆ.
ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಆಧೀನಸ್ಥ ಸಂಸ್ಥೆಯಾಗಿರುವ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಕಾರವಾರ ಪ್ರಾದೇಶಿಕ ಕೇಂದ್ರವು ಪ್ರಸ್ತುತ ಪಂಜರ ಕೃಷಿ ತಂತ್ರಜ್ಞಾನದ ಸುಸ್ಥಿರ ಅಭಿವೃದ್ಧಿ, ಮೀನು ಮರಿ ಉತ್ಪಾದನೆ ಹಾಗೂ ಪಂಜರ ಕೃಷಿ ಮೀನುಗಳ ಅರೋಗ್ಯ ನಿರ್ವಹಣಾ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದೆ.
ಅದಲ್ಲದೇ ಈಗಾಗಲೇ ಅನೇಕ ಯೋಜನೆಗಳಡಿ ಜಿಲ್ಲೆಯ ಸುಮಾರು 1216 ಮೀನುಗಾರರು ಮತ್ತು ಉದ್ಯಮದಲ್ಲಿರುವವರಿಗೆ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದೆ.
ಸಮುದ್ರ ಪಂಜರ ಕೃಷಿಯ ಪ್ರಾತ್ಯಕ್ಷಿಕೆಯನ್ನುಪ್ರಾದೇಶಿಕ ಕೇಂದ್ರದಿಂದಪ್ರ ಪ್ರಥಮವಾಗಿ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ 2008-2009 ರಲ್ಲಿ ಪ್ರಾರಂಭಿಸಿತ್ತು. ಹಾಗೇನೆ ಹಿನ್ನೀರು ಪಂಜರ ಕೃಷಿಯನ್ನು ಕಾರವಾರ ತಾಲೂಕಿನ ನಾಗನಾಥ ವಾಡಾದಲ್ಲಿ 2017-201 8ರಲ್ಲಿ ಪ್ರಾರಂಭಿಸಿ ಯಶಸ್ವಿಯಾಗಿದೆ.
ಅಂಕೋಲಾ ಮತ್ತು ಕಾರವಾರ ತಾಲೂಕಿನ ಮೀನುಗಾರರ ಸಹಯೋಗದಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಅನುದಾನದ ‘ಅಖಿಲ ಭಾರತ ಸಮುದ್ರ ಕೃಷಿ ಜಾಲ ಯೋಜನೆ’ ಯಡಿಕುರುಡಿ, ಮುಡಿಸ್, ತಾಂಬೂಸ್ ಮತ್ತು ಗೊಬ್ಬರೆ ಮೀನುಗಳ ಪಂಜರ ಕೃಷಿಯ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಗಿರುತ್ತದೆ.
ಜಿಲ್ಲೆಯ ಪರಿಶಿಷ್ಠ ಜನಾಂಗದ ಆರ್ಥಿಕ ಸ್ಥಿತಿಯನ್ನು ಮೇಲ್ಮಟ್ಟಕ್ಕೇರಿಸಲು‘ಪರಿಶಿಷ್ಠ ಜಾತಿ ಉಪಯೋಜನೆ” ಯಡಿ ಪಂಜರ ಕೃಷಿಯನ್ನು ಸಮರ್ಥವಾಗಿ ಜಾರಿಗೊಳಿಸಲಾಗಿದೆ.
ಪಂಜರ ಕೃಷಿ ಪ್ರಾತ್ಯಕ್ಷಿಕೆಗಳನ್ನು ಪ್ರಾರಂಭಿಸಿದಂದಿನಿಂದಲೂ ಜಿಲ್ಲೆಯ ಸಮುದ್ರ ಮತ್ತುತೀರ ಪ್ರದೇಶದ ಪಂಜರ ಮೀನು ಕೃಷಿಕರಿಗೆ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಕಾರವಾರ ಪ್ರಾದೇಶಿಕ ಕೇಂದ್ರವು ನಿರಂತರವಾಗಿ ಈ ತಂತ್ರಜ್ಞಾನದ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ನೀಡುತ್ತಿದೆ.