ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ಸ್ವಾವಲಂಬಿಗಳಾಗಬೇಕು: ಡಾ. ರಾಜೇಂದ್ರ ಕೆ.ವಿ.
ಮಂಗಳೂರು, ಮಾರ್ಚ್ 04, 2021: ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎಲ್ಲರೊಂದಿಗೆ ಬೆರೆಯಬೇಕು ಹಾಗೂ ಸರ್ಕಾರದಿಂದ ನೀಡಿರುವ ಸೌಲಭ್ಯವನ್ನು ಸದುಪಯೋಗ ಪಡಿಸುವುದರೊಂದಿಗೆ ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದರು.
ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರಕಾರದಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ ನೀಡುವುದರೊಂದಿಗೆ ಸರಕಾರದಿಂದ ಅವರುಗಳಿಗೆ ನೀಡಿರುವ ಮೂಲಭೂತ ಸೌಕರ್ಯಗಳನ್ನು ತಲುಪಿಸುವ ಕೆಲಸವಾಗಬೇಕು ಎಂದರು.
ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರಿಗೋಸ್ಕರ ಜಾರಿಗೆ ತಂದಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ, ಅವರನ್ನು ಫಲಾನುಭವಿಗಳನ್ನಾಗಿಸಬೇಕು.
ಜಿಲ್ಲೆಯಲ್ಲಿ ಮೈತ್ರಿ ಯೋಜನೆಯಡಿ 22 ಫಲಾನುಭವಿಗಳಿದ್ದಾರೆ. ಅವರುಗಳಿಗೆ ಸರಿಯಾಗಿ ಪಿಂಚಣಿ ಬರುತ್ತಿಲ್ಲ ಎಂಬ ಬಗ್ಗೆ ದೂರು ಕೇಳಿ ಬರುತ್ತಿದೆ.
ಈ ಬಗ್ಗೆ ಕಂದಾಯ ಇಲಾಖೆಯ ಶಿರಾಸ್ಥಿದಾರರು ಗಮನಹರಿಸುವುದರೊಂದಿಗೆ ಎಲ್ಲಾ ಫಲಾನುಭವಿಗಳಿಗೆ ಪಿಂಚಣಿ ದೊರೆಯುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ಒದಗಿಸಲು ಜಾಗ ಗುರುತಿಸುವುದರೊಂದಿಗೆ ಅವರುಗಳಿಂದ ಅರ್ಜಿಗಳನ್ನು ಸ್ವೀಕರಿಸಿ ಅರ್ಹರಿಗೆ ನಿವೇಶನ ನೀಡಬೇಕು ಹಾಗೂ ಹಿಂದುಕುಷ್ಟ್ ನಿವಾರಣ್ ಸಂಘ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ದಮನಿತ ಮಹಿಳೆಯರಿಗೆ ಸೂಕ್ತ ಸಲಹೆ ನೀಡಿ ಅವರನ್ನು ಕೌನ್ಸಿಲಿಂಗ್ ನಡೆಸಿ ಅದರಿಂದ ಹೊರತರುವ ಪ್ರಯತ್ನ ನಡೆಸಬೇಕು.
ಇದರಲ್ಲಿ 10 ಮಂದಿ ಎಚ್.ಐ.ವಿ ಸೋಂಕಿತರಿದ್ದು, ಅವರನ್ನು ಸರಿಯಾಗಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಬೇಕು. ಅಲ್ಲದೇ ಎಲ್ಲಾ ಲಿಂಗತ್ವ ಅಲ್ಪ ಸಂಖ್ಯಾತರಿಗೂ ಒಂದು ಶಿಬಿರ ಆಯೋಜಿಸಿ ಅಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು ಎಂದರು.
ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ದಮನಿತ ಮಹಿಳೆಯರಿಗೆ ಪಡಿತರ ಚೀಟಿಗಳನ್ನು ನೀಡಬೇಕು ಎಂದ ಅವರು, ಈಗಾಗಲೇ ಗುರುತಿಸಿರುವ 17 ದಮನಿತ ಮಹಿಳೆಯರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಿ.ಪಿ.ಎಲ್ ಕಾರ್ಡ್‍ನ್ನು ಶೀಘ್ರವಾಗಿ ನೀಡಬೇಕು.
ಪ್ರಸ್ತುತ ಸಾಲಿನಲ್ಲಿ ಧನಶ್ರೀ ಯೋಜನೆಯಡಿ 8 ಜನರಿಗೆ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ವಿಳಂಬವಿಲ್ಲದೆ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಾಪ ಭೋವಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಟ್ರೂಡ್ ವೇಗಸ್, ವೆನ್‍ಲಾಕ್ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಶಾನ್‍ಭೋಗ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.