ಮಂಗಳೂರು: ಪತ್ರಕರ್ತರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ
ಮಂಗಳೂರು, ಮಾರ್ಚ್ 04, 2021: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲ್ಲಿ ಪತ್ರಕರ್ತರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್ ವಿತರಣೆ ನಡೆಯಿತು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಪತ್ರಕರ್ತರಿಗೆ ಕಾರ್ಡ್ ವಿತರಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮಾ. 8ರಂದು ಆಸ್ಪತ್ರೆಗಳ ಮುಖ್ಯಸ್ಥರನ್ನು ಒಳಗೊಂಡ ಕುಂದುಕೊರತೆ ಪರಿಹಾರ ಸಭೆಯನ್ನು ನಡೆಸಲಾಗುವುದು ಎಂದು ಹೇಳಿದರು.
ಆಯುಷ್ಮಾನ್ ಯೋಜನೆಯಡಿ ರೋಗಿ ಆಸ್ಪತ್ರೆಗೆ ದಾಖಲಾದ 24 ಗಂಟೆವರೆಗಿನ ಹಾಗೂ ಆಯುಷ್ಮಾನ್ ಕಾರ್ಡ್ ಅಡಿ ಚಿಕಿತ್ಸೆಗೆ ಸಮ್ಮತಿ ದೊರಕುವ ವರೆಗಿನ ವೆಚ್ಚವನ್ನು ರೋಗಿಯೇ ಭರಿಸಬೇಕಾಗುತ್ತದೆ.
ಆಸ್ಪತ್ರೆಗಳಲ್ಲಿ ರೋಗಿಯ ಎಂಆರ್‌ಐ, ಸಿಟಿ ಸ್ಕಾನ್‌ನಂತಹ ತಪಾಸಣೆಯನ್ನು ಕಾರ್ಡ್ ಅಡಿ ಚಿಕಿತ್ಸೆ ಆರಂಭಗೊಳ್ಳುವುದರಿಂದ ಬಡ ರೋಗಿಗಳಿಗೆ ಈ ಇದು ದುಬಾರಿಯಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ.
ಈ ಕುರಿತು ಆಸ್ಪತ್ರೆಗಳ ಮುಖ್ಯಸ್ಥರ ಜತೆ ಚರ್ಚಿಸಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಅವರು ಹೇಳಿದರು.
ಆಯುಷ್ಮಾನ್ ಭಾರತ್ ಯೋಜನೆಯ ಕುರಿತಂತೆ ಮಾಹಿತಿ ನೀಡಿದ ಜಿಲ್ಲಾ ನೋಡಲ್ ಅಧಿಕಾರಿ ಡಾ. ರತ್ನಾಕರ್, ರೋಗಿ ಆಸ್ಪತ್ರೆಗೆ ದಾಖಲಾಗಿ ಕಾಯಿಲೆ ಖಾತ್ರಿಯಾಗುವವರೆಗಿನ ಚಿಕಿತ್ಸಾ ವೆಚ್ಚವನ್ನು ರೋಗಿಯ ಕಡೆಯವರೇ ಭರಿಸಬೇಕಾಗುತ್ತದೆ.
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 1650 ವಿಧದ ಚಿಕಿತ್ಸೆಗಳು ಜಿಲ್ಲೆಯ 32 ಆಸ್ಪತ್ರೆಗಳಲ್ಲಿ ಗರಿಷ್ಠ 5 ಲಕ್ಷದವರೆಗಿನ ಚಿಕಿತ್ಸೆ ಉಚಿತವಾಗಿರುತ್ತದೆ.
ಎಪಿಎಲ್ ಕಾರ್ಡ್ ನವರಿಗೆ ಶೇ. 30ರಷ್ಟು ಚಿಕಿತ್ಸಾ ವೆಚ್ಚ ಆಯುಷ್ಮಾನ್ ಕಾರ್ಡ್ ಅಡಿ ಅನ್ವಯವಾಗುತ್ತದೆ.
ರೋಗಿ ಆಸ್ಪತ್ರೆಗೆ ದಾಖಲಾಗಿ 24 ಗಂಟೆಯೊಳಗೆ ಮರಣ ಹೊಂದಿದ್ದಲ್ಲಿ ಆಯುಷ್ಮಾನ್ ಕಾರ್ಡ್ ಅನ್ವಯವಾಗುವುದಿಲ್ಲ.
ಒಂದು ಬಾರಿ ಸರ್ಜರಿಗೊಳಪಟ್ಟಲ್ಲಿ ಮತ್ತೆ ಆರು ತಿಂಗಳವರೆಗೆ ಅದೇ ಸರ್ಜರಿಗೆ ಕಾರ್ಡ್ ಅನ್ವಯಿಸುವುದಿಲ್ಲ ಎಂದು ವಿವರಿಸಿದರು.
ದ.ಕ. ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ಉಪಸ್ಥಿತರಿದ್ದರು. ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.