ಕೇಂದ್ರ ಸರ್ಕಾರದ ನೀತಿಗಳು ಬಂಡವಾಳಶಾಹಿಗಳ ಪರ: ವಸಂತ ಆಚಾರಿ ಆರೋಪ

 ಕೇಂದ್ರ ಸರ್ಕಾರದ ನೀತಿಗಳು ಬಂಡವಾಳಶಾಹಿಗಳ ಪರ: ವಸಂತ ಆಚಾರಿ ಆರೋಪ
Share this post

ಬೆಳ್ತಂಗಡಿ, ಫೆ 28, 2021: ಕೇಂದ್ರ ಸರ್ಕಾರದ ನೀತಿಗಳು ಬಂಡವಾಳಶಾಹಿಗಳ ಪರವಾಗಿದ್ದು , ಇದರಿಂದಾಗಿ ಅದಾನಿ , ಅಂಬಾನಿ ಸೇರಿದಂತೆ ಶ್ರೀಮಂತ ವರ್ಗದವರಿಗೆ ಮಾತ್ರ ಲಾಭವಾಗಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ , ದ.ಕ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಆರೋಪಿಸಿದರು.

ಅವರು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ತೈಲ ಬೆಲೆ, ಗ್ಯಾಸ್ ದರ ಏರಿಕೆ, ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಿದ್ದರು.

ಪೆಟ್ರೋಲ್ ದರ ಏರಿಕೆಯಲ್ಲಿ ಶತಕ ಬಾರಿಸಿದ ನರೇಂದ್ರ ಮೋದಿಯವರ ಸಾಧನೆ ಮುರಿಯಲು ಯಾರಿಗೂ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ ಅವರು ಕೇಂದ್ರ ಸರ್ಕಾರದ ನೀತಿಗಳು ಬಂಡವಾಳಶಾಹಿಗಳ ಪರವಾಗಿದ್ದು , ಇದರಿಂದಾಗಿ ಅದಾನಿ , ಅಂಬಾನಿ ಸೇರಿದಂತೆ ಶ್ರೀಮಂತ ವರ್ಗದವರಿಗೆ ಮಾತ್ರ ಲಾಭವಾಗಿದೆ. ಇದರ ವಿರುದ್ಧ ದೇಶದಾದ್ಯಂತ ನಡೆಯುತ್ತಿರುವ ಹೋರಾಟ ಆಶಾದಾಯಕ ಬೆಳೆವಣಿಗೆ ಎಂದರು.

ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಶಿವಕುಮಾರ್ ಎಸ್. ಎಂ ಮಾತನಾಡುತ್ತಾ ನರೇಂದ್ರ ಮೋದಿ ಸರ್ಕಾರ ಒಂದು ತಿಂಗಳಲ್ಲಿ 100 ರೂಪಾಯಿ ಗ್ಯಾಸ್ ಬೆಲೆ ಏರಿಕೆ ಮಾಡುವ ಮೂಲಕ ಬಡವರ ಹೊಟ್ಟೆಗೆ ಹೊಡೆಯುವ ನೀಚ ರಾಜಕೀಯ ಮಾಡಿದ್ದಾರೆ. ಕರೋನಾ ಲಾಕ್ಡೌನ್ ಸಂದರ್ಭದಲ್ಲಿ ಜನತೆಯನ್ನು ಕತ್ತಲಲ್ಲಿಟ್ಟು ರೈತ, ಕಾರ್ಮಿಕನಡುವೆಯೂ ನೀತಿಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿ ಸಂವಿಧಾನ ವಿರೋಧಿಯಾಗಿ ವರ್ತಿಸಿರುವ ಸರ್ವಾಧಿಕಾರಿ ನರೇಂದ್ರ ಮೋದಿ ವಿರುದ್ಧ ಜನರು ಸಂಘಟಿತ ಹೋರಾಟ ನಡೆಸಬೇಕು ಎಂದರು.

ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಮಾತನಾಡಿ ಕೇಂದ್ರದ ಕೃಷಿ ಕಾಯಿದೆಗಳ ವಿರುದ್ಧ ದೆಹಲಿಯ ಕೊರೆಯುವ ಚಳಿಯ ನಡುವೆಯೂ 4 ತಿಂಗಳಿಂದ ರೈತರು ನಡೆಸುವ ಹೋರಾಟದ ಬಗ್ಗೆ ಮೌನ ವಹಿಸುವ ಪ್ರಧಾನಿ ರೈತ ವಿರೋಧಿ ಕಾಯ್ದೆ ವಾಪಸ್ ಪಡೆಯದೆ ಹಠಮಾರಿ ಧೋರಣೆ ಮುಂದುವರೆಸುವ ಮೂಲಕ ತಾನೊಬ್ಬ ಸರ್ವಾಧಿಕಾರಿ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಮುಖಂಡ ಶೇಖರ್ ಲಾಯಿಲ, ಸರ್ಕಾರ ನೀತಿಯ ವಿರುದ್ಧ ಧ್ವನಿ ಎತ್ತುವವರನ್ನು ದೇಶದ್ರೋಹಿಗಳೆಂದು ಜೈಲಿಗಟ್ಟಲಾಗುತ್ತಿದೆ . ರೈತ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಹೋರಾಟಗಾರ್ತಿ ದಿಶಾ ರವಿ ಅವರನ್ನು ದೇಶದ್ರೋಹ ಕೇಸಿನಡಿ ಭಯೋತ್ಪಾದಕರನ್ನು ಬಂಧಿಸುವ ರೀತಿಯಲ್ಲಿ ಬಂಧಿಸಿದರೂ ಮಾನ್ಯ ನ್ಯಾಯಾಲಯ ಜಾಮೀನು ನೀಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಛಾಟಿ ಬೀಸಿದೆ ಎಂದರು.

ಪ್ರತಿಭಟನೆಯ ನೇತೃತ್ವವನ್ನು ಸಿಪಿಐ(ಎಂ) ಪಕ್ಷದ ನಾಯಕರಾದ ರೋಹಿಣಿ ಪೆರಾಡಿ , ರೈತ ಮುಖಂಡ ನೀಲೇಶ್ ಹೆಚ್ ಪೆರಿಂಜೆ , ಜಯನ್ ಮುಂಡಾಜೆ , ಜೋಸ್ ಕುದ್ಯಾಡಿ , ಮಹಿಳಾ ನಾಯಕರಾದ ಸುಕನ್ಯಾ ಹರಿದಾಸ್, ಸುಧಾ ಕೆ ರಾವ್ , ಕುಸುಮ ಮಾಚಾರ್ , ಶ್ರಮಶಕ್ತಿ ಸ್ವಸಹಾಯ ಗುಂಪಿನ ಸಂಯೋಜಕ ಸಂಜೀವ ಆರ್ ಅತ್ತಾಜೆ , ಎಸ್ಎಫ್ಐ ಮುಖಂಡ ಸುಹಾಸ್ ಬೆಳ್ತಂಗಡಿ ವಹಿಸಿದ್ದರು.

ಸಿಪಿಐ(ಎಂ) ಮುಖಂಡ ವಸಂತ ನಡ ವಂದಿಸಿದರು. ಒಲೆ ಉರಿಸುವ ಮೂಲಕ ಕಾರ್ಯಕರ್ತರು ಪ್ರತಿಭಟನೆ ವ್ಯಕ್ತಪಡಿಸಿದರು. ಸರ್ಕಾರದ ನೀತಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Subscribe to our newsletter!

Other related posts

error: Content is protected !!