ಮಕ್ಕಳ ಮೇಲಿನ ಶೋಷಣೆ ತಡೆಗೆ ಜಾಗೃತಿ ಮೂಡಿಸಿ : ಡಿಸಿ
ಕಾರವಾರ ಫೆಬ್ರವರಿ 19, 2021: ಬಾಲ್ಯ ವಿವಾಹ, ಭಿಕ್ಷಾಟಣೆ, ಪೋಕ್ಸೋ, ಬಾಲ ಕಾರ್ಮಿಕರ
ಸಮಸ್ಯೆ ಸೇರಿದಂತೆ ಮಕ್ಕಳ ಮೇಲಿನ ಶೋಷಣೆಗಳಿಗೆ ತಕ್ಷಣ ಪರಿಹಾರ ದೊರೆಯುಲು
ಸಾರ್ವಜನಿಕರ ಸಹಭಾಗಿತ್ವ ಕೂಡ ಮುಖ್ಯವಾಗಿದ್ದು, ಈ ಕುರಿತು ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ
ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು
ಸಮಸ್ಯೆಗೆ ಸೂಕ್ತ ಪರಿಹಾರ ಸಿಗಬೇಕಾದರೆ ಆ ಸಮಸ್ಯೆಯ ಮೂಲ ತಿಳಿಯುವುದು ಅತೀ
ಮುಖ್ಯವಾಗಿರುತ್ತದೆ.
ಸಮಾಜದಲ್ಲಿರುವ ಬಾಲ್ಯ ವಿವಾಹ, ಭಿಕ್ಷಾಟಣೆ, ಪೋಕ್ಸೋ ಪ್ರಕರಣಗಳನ್ನು ಬಾಲ ಕಾರ್ಮಿಕರನ್ನು ಗುರುತಿಸಿ ಸಾರ್ವಜನಿಕರು ತಮ್ಮ ಸುತ್ತಲೂ ನಡೆಯುವ ಘಟನೆಗಳ ಕುರಿತು ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತಾಗಲು ಜನರಲ್ಲಿ ಕಾಯ್ದೆ ಕಾನೂನು ಹಾಗೂ ಸಂಬಂಧಿಸಿದ ಇಲಾಖೆಗಳ ಕುರಿತು ಜಾಗೃತಿ ಮೂಡಿಸಿದಾಗ ಮಾತ್ರ ಸುಸ್ಥಿರ ಮತ್ತ ಸುರಕ್ಷಿತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಕ್ರಮಳನ್ನು ಹಮ್ಮಿಕೊಳ್ಳಿ ಜೊತೆಗೆ ಮಕ್ಕಳ ಮಾರಾಟ, ವಲಸೆ ಕಾರ್ಮಿಕ ಸಮಸ್ಯೆಗಳ ಕುರಿತಾಗಿ ಹೆಚ್ಚಿನ ಗಮನ ಹರಿಸಿ , ದತ್ತು ಪ್ರಕ್ರೀಯೆಗಳು ಕಾನೂನು ಬಾಹಿರವಾಗದಂತೆ ನೋಡಿಕೊಳ್ಳಬೇಕೆಂದರು.
ಬಾಲಾಪರಾಧಕ್ಕೆ ಸಂಬಂಧಿಸಿದಂತೆ 2013ರಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 288 ಪ್ರಕರಣಗಳು ದಾಖಲಾಗಿದ್ದು, ಇನ್ನೂ 175 ಪ್ರಕರಣಗಳು ಇತ್ಯರ್ಥವಾಗಿಲ್ಲ.
2020-21 ಸಾಲಿನಲ್ಲಿ ಶಿರಸಿ ವಿಭಾಗದಲ್ಲಿ 37 ಹಾಗೂ ಕಾರವಾರದಲ್ಲಿ 19 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ ಅವರು ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ
ತಡೆಗಟ್ಟಲು ಕೈಗೊಂಡ ಕಾರ್ಯಗಳ ಕುರಿತು ಜಿಲ್ಲಾಧಿಕಾರಿ ಎಲ್ಲಾ ತಾಲೂಕುಗಳ ಶಿಶು ಅಭಿವೃದ್ಧಿ
ಯೋಜನಾಧಿಕಾರಿಗಳೊಂದಿಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಸಿಇಓ ಪ್ರಿಯಾಂಗಾ ಎಮ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಎಸ್. ಬದರಿನಾಥ, ಡಿಹೆಚ್‍ಒ ಡಾ. ಶರದ ನಾಯಕ, ಡಿಡಿಪಿಐ ಹರೀಶ ಗಾಂವಕರ್ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.