ಧರ್ಮಸ್ಥಳ ಶಾಂತಿವನದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರ

 ಧರ್ಮಸ್ಥಳ ಶಾಂತಿವನದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರ
Share this post

ಬೆಳ್ತಂಗಡಿ, ಜನವರಿ 09, 2021: ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗ ವಿಜ್ಞಾನದಲ್ಲಿ ದೇಶದಲ್ಲೆ ಪ್ರಥಮವಾಗಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಸಂಶೋಧನಾ ಕೇಂದ್ರವನ್ನು ಮಂಜೂರು ಮಾಡಿದ್ದು, ಇದು ಜಾಗತಿಕ ಮಟ್ಟದಲ್ಲಿ ಮಾದರಿ ಸಂಶೋಧನಾ ಕೇಂದ್ರವಾಗಿ ಬೆಳೆಯಲಿ ಎಂದು ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಹೇಳಿದರು.

ಅವರು ಶನಿವಾರ ಧರ್ಮಸ್ಥಳದಲ್ಲಿರುವ ಶಾಂತಿವನದಲ್ಲಿ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಅನುದಾನದೊಂದಿಗೆ ಪ್ರಾರಂಭಿಸಿದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

2014ರಲ್ಲಿ ತಾನು ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ರಜತ ಮಹೋತ್ಸವ ಸಮಾರಂಭಕ್ಕೆ ಬಂದಾಗ ಕಾಲೇಜಿನ ಉತ್ತಮ ಶೈಕ್ಷಣಿಕ ಗುಣಮಟ್ಟ, ಪ್ರಯೋಗಾಲಯ ಹಾಗೂ ಸೌಲಭ್ಯಗಳನ್ನು ಗಮನಿಸಿ ಕಾಲೇಜಿಗೆ ದೇಶದಲ್ಲೆ ಪ್ರಥಮ ಸಂಶೋಧನಾ ಕೇಂದ್ರ ಮಂಜೂರು ಗೊಳಿಸಲಾಗಿದೆ.

ಈಗಾಗಲೆ ಸಂಶೋಧನಾ ಕೇಂದ್ರಕ್ಕೆ 8.73 ಕೋಟಿ ರೂ. ನೀಡಿದ್ದು, ಇನ್ನೂ 1.27 ಕೋಟಿ ರೂ. ನೆರವು ನೀಡುವುದಾಗಿ ಸಚಿವರು ಪ್ರಕಟಿಸಿದರು.

ಜಾಗತಿಕ ಮಟ್ಟದ ಪತ್ರಿಕೆಗಳಲ್ಲಿ ಸಂಶೋಧನಾ ಕೇಂದ್ರದ ಲೇಖನಗಳನ್ನು ಪ್ರಕಟಿಸಬೇಕೆಂದು ಅವರು ಸಲಹೆ ನೀಡಿದರು.

60 ಹಾಸಿಗೆಗಳ ಸಾಮಥ್ರ್ಯದ ಆಸ್ಪತ್ರೆ ಕಟ್ಟಡ, ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರವನ್ನು ಅತಿ ಕಡಿಮೆ ಸಮಯದಲ್ಲಿ ಉತ್ತಮವಾಗಿ ನಿರ್ಮಿಸಿರುವ ಬಗ್ಯೆ ಡಾ. ಹೆಗ್ಗಡೆಯವರನ್ನು ಸಚಿವರು ಅಭಿನಂದಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಾರತೀಯ ನಂಬಿಕೆ ನಡವಳಿಕೆಗಳು ಸಂಪ್ರದಾಯಗಳು ಆಚಾರ-ವಿಬಾರಗಳು ಮೂಡನಂಬಿಕೆಗಳಲ್ಲ. ಎಲ್ಲವೂ ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿವೆ ಎಂದರು.

ಭಾರತದಲ್ಲಿ ಸುಮಾರು ಐದು ಸಾವಿರ ವರ್ಷಗಳಿಂದ ಋಷಿ-ಮುನಿಗಳು, ಸಾಧು-ಸಂತರು ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯ ಮೂಲಕ ಆರೋಗ್ಯ ಭಾಗ್ಯವನ್ನು ಪಡೆಯುತ್ತಿದ್ದರು. ವಿದೇಶಗಳಲ್ಲಿ ಕೂಡಾ ಇಂದು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಆಸಕ್ತಿಯಿಂದ ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಧಾರವಾಡದಲ್ಲಿರುವ ಎಸ್.ಡಿ.ಎಂ. ವೈದ್ಯಕೀಯ ವಿಶ್ವವಿದ್ಯಾಯಲಯವು ಈಗಾಗಲೆ ದೇಶದಲ್ಲಿ ಪ್ರಥಮ ಸ್ಥಾನ ಹೊಂದಿದ್ದು ಧರ್ಮಸ್ಥಳದಲ್ಲಿರುವ ಸಂಶೋಧನಾ ಕೇಂದ್ರವನ್ನು ಕೂಡಾ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಸಂಸದ ನಳಿನ್‍ಕುಮಾರ್ ಕಟೀಲ್, ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಶಾಂತ ಶೆಟ್ಟಿ, ಆಯುಷ್ ಮಂತ್ರಾಲಯದ ನಿರ್ದೇಶಕ ವಿಕ್ರಂ ಸಿಂಗ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಎಸ್. ಸಚ್ಚಿದಾನಂದ ಆಯುಷ್ ನಿರ್ದೇಶನಾಲಯದ ಆಯುಕ್ತ ಮೀನಾಕ್ಷಿ ನೇಗಿ, ಶಾಸಕರುಗಳಾದ ಹರೀಶ್ ಪೂಂಜ, ಕೆ. ಹರೀಶ್ ಕುಮಾರ್ ಮತ್ತು ಕೆ. ಪ್ರತಾಪಸಿಂಹ ನಾಯಕ್, ಡಿ. ಹರ್ಷೇಂದ್ರ ಕುಮಾರ್, ಮತ್ತು ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಸ್ವಾಗತಿಸಿದರು. ಕಾಲೇಜಿನ ಯೋಗ ವಿಭಾಗದ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

Also read:

Mangaluru top Cop’s song video goes viral

Subscribe to our newsletter!

Other related posts

error: Content is protected !!