ಪ್ರಾಣಿಗಳಿಗೂ ಸಹ ನಮ್ಮ ಹಾಗೆಯೇ ಬದುಕುವ ಹಕ್ಕು ಇದೆ : ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ
ಮಂಗಳೂರು ನ 11: ಪ್ರಾಣಿಗಳಿಗೂ ಸಹ ನಮ್ಮ ಹಾಗೆಯೇ ಬದುಕುವ ಹಕ್ಕಿದ್ದು, ಇವುಗಳ ಉಲ್ಲಂಘಿಸಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.
ಅವರು ಸೋಮವಾರ ತಮ್ಮ ಕಛೇರಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
“ಕಾಡಿನಂಚಿನಲ್ಲಿ ಕೃಷಿ ಭೂಮಿಯನ್ನು ಹೊಂದಿರುವವರಿಗೆ ರಕ್ಷಣೆಗಾಗಿ ಜಿಲ್ಲಾಡಳಿತದ ವತಿಯಿಂದ ಗನ್ ಲೈಸೆನ್ಸ್ ನೀಡಲಾಗಿದ್ದು, ಪರವಾನಿಗೆ ಇಲ್ಲದೆ ಅಕ್ರಮವಾಗಿ ಗನ್‍ಗಳನ್ನು ಇಟ್ಟುಕೊಂಡಿದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು,” ಎಂದು ಎಚ್ಚರಿಸಿದರು.
ಸರ್ಕಾರದಿಂದ ಗೋಶಾಲೆಗಳ ಜಾನುವಾರುಗಳ ನಿರ್ವಹಣೆಗೆ “ಮೈಸೂರಿನ ಪಿಂಜರಾಪೋಲ್ ಮತ್ತು ಇತರೆ ಗೋಶಾಲೆಗಳಿಗೆ ಬೆಂಬಲ ನೀಡುವ ಕಾರ್ಯಕ್ರಮ”ದಡಿ ಸಹಾಯಧನ ನೀಡಲಾಗುತ್ತಿದೆ. ಈ ವರ್ಷ ಸಹಾಯಧನ ಕೋರಿ 13 ಗೋಶಾಲೆಗಳು ಅರ್ಜಿ ಸಲ್ಲಿಸಿದ್ದು, ಕೋವಿಡ್-19 ಅವಧಿಯಲ್ಲಿ 8 ಗೋಶಾಲೆಗಳಿಗೆ ರೂ. 1689975 ಅನುದಾನ ನೀಡಲಾಗಿದೆ ಎಂದರು.
ಕಾಡಿನಂಚಿನಲ್ಲಿ ಕೃಷಿ ಭೂಮಿಯನ್ನು ಹೊಂದಿರುವವರಿಗೆ ರಕ್ಷಣೆಗಾಗಿ ಜಿಲ್ಲಾಡಳಿತದ ವತಿಯಿಂದ ಗನ್ ಲೈಸೆನ್ಸ್ ನೀಡಲಾಗಿದ್ದು, ಪರವಾನಿಗೆ ಇಲ್ಲದೆ ಅಕ್ರಮವಾಗಿ ಗನ್‍ಗಳನ್ನು ಇಟ್ಟುಕೊಂಡಿದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು
ಜಿಲ್ಲೆಯಲ್ಲಿ ಅಕ್ರಮ ಗೋವು ಸಾಗಾಣಿಕೆ/ಗೋ ಮಾಂಸ ಮಾರಾಟವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಕ್ರಮಕೈಗೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ರೇಬೀಸ್ ಕ್ಯಾಂಪ್ ಮತ್ತು ಎ.ಬಿ.ಸಿ., ಕಾರ್ಯಕ್ರಮವನ್ನು ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಆದೇಶದನ್ವಯ ಪೆಟ್ ಶಾಪ್ ಮತ್ತು ಡಾಗ್ ಬ್ರೀಡಿಂಗ್ ಸೆಂಟರ್ ನಡೆಸುತ್ತಿರುವವರು ಕಡ್ಡಾಯವಾಗಿ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದ ಜಿಲ್ಲಾಧಿಕಾರಿ ಬೇಸಿಗೆ ಅವಧಿಯಲ್ಲಿ ಕಾಡಿನಲ್ಲಿರುವ ಪ್ರಾಣಿಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಕಾಡಿನಲ್ಲಿ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಅಕ್ಷಯ್ ಶ್ರೀಧರ್, ಪಶುಪಾಲನಾ ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಟಿ.ಜಿ ಪ್ರಸನ್ನ, ಶ್ರೀ ವಿನಯ್ ಎಲ್ ಶೆಟ್ಟಿ, ಶ್ರೀ ಹೆಚ್ ಶಶಿಧರ ಶೆಟ್ಟಿ, ಶ್ರೀಮತಿ ಸುಮಾ ಆರ್ ನಾಯಕ್ ಹಾಗೂ ವಿವಿಧ ಗೋಶಾಲೆಯವರು, ಪಶುವೈದ್ಯಾಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.