ಸರಕಾರ ನಿಗಧಿ ಪಡಿಸಿರುವ ದರಕ್ಕಿಂತ ಹೆಚ್ಚಿನ ಬೆಲೆಗೆ ಮರಳು ಮಾರಾಟ ಮಾಡಿದ್ದಲ್ಲಿ ಪರವಾನಿಗೆ ರದ್ದು : ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಕೆ
ಕಾರವಾರ, ನ 05:ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಮರಳು ಸಿಗುತ್ತಿಲ್ಲ, ಸಿಕ್ಕರೂ ಕೂಡಾ ದುಪ್ಪಟ್ಟು ಬೆಲೆ ತೆರಬೇಕಾಗಿದೆ ಎಂಬ ಕೂಗು ಪದೇ ಪದೇ ಕೇಳಿ ಬರುತ್ತಿದ್ದು, ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಅನುಮತಿ ಪಡೆದಿರುವ ಟಿಪಿ ದಾರರು ಅಥವಾ ಸಾಗಾಣಿಕೆದಾರರು ಸಾರ್ವಜನಿಕರಿಂದ ಹೆಚ್ಚಿನ ಬೆಲೆಯನ್ನು ವಸೂಲಿ ಮಾಡುತ್ತಿರುವದು ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಗಮನಕ್ಕೆ ಬಂದಿರುತ್ತದೆ. ಇದನ್ನು ನಿಯಂತ್ರಿಸುವ ಅವಶ್ಯಕತೆ ಇದ್ದು ಜಿಲ್ಲೆಯ ಸಾಮಾನ್ಯ ನಾಗರೀಕರಿಗೆ ಕೂಡಾ ಯೋಗ್ಯದರದಲ್ಲಿ ಮರಳು ಲಬ್ಯವಾಗುವಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಕೆ ಹೇಳಿದ್ದಾರೆ.
ಅದಕ್ಕಾಗಿ ಜಿಲ್ಲೆಯ ಅಂಕೋಲಾ, ಶಿರಸಿ, ದಾಂಡೇಲಿ, ಹೊನ್ನಾವರ, ಭಟ್ಕಳ ಹಾಗೂ ಹಳಿಯಾಳ ತಾಲೂಕುಗಳಲ್ಲಿ ಮರಳು ದಾಸ್ತಾನು ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮರಳು ದಾಸ್ತಾನು ಕೇಂದ್ರಗಳನ್ನು ತಾಲೂಕಾ ಮರಳು ಉಸ್ತುವಾರಿ ಸಮಿತಿಯ ಮೇಲುಸ್ತುವಾರಿಯಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರ ನಿರ್ವಹಣೆ ಮಾಡುತ್ತದೆ. ಈ ಮೊದಲು ಸರಕಾರಿ ಉದ್ದೇಶದ ಕಾಮಗಾರಿಗಳಿಗೆ ಮಾತ್ರ ಮರಳು ದಾಸ್ತಾನು ಕೇಂದ್ರಗಳಿಂದ ಮರಳು ಪೂರೈಕೆ ಮಾಡಲು ನಿರ್ಧರಿಸಿದ್ದು, ಇನ್ನು ಮುಂದೆ ಸಾರ್ವಜನಿಕರಿಗು ಕೂಡಾ ಇಲ್ಲಿಂದಲೇ ಮರಳು ಪೂರೈಸಲು ನಿರ್ಧರಿಸಲಾಗಿದೆ.
“ಮರಳಿನ ಅವಶ್ಯಕತೆ ಇರುವ ಸಾರ್ವಜನಿಕರು ತಮಗೆ ಅವಶ್ಯವಿರುವ ಮರಳಿನ ಪ್ರಮಾಣವನ್ನು ಸಹಾಯವಾಣಿ ಸಂಖ್ಯೆ 8123599266 ಗೆ ತಿಳಿಸಿದಲ್ಲಿ , ತಾಲೂಕಾ ಮರಳು ಉಸ್ತುವಾರಿ ಸಮಿತಿಯು ಮರಳಿಗೆ ಅನ್ವಯಿಸುವ ದರವನ್ನು ನಿಗಧಿಪಡಿಸಿ ನೀಡಿದ ನಂತರ ಮರಳು ಖರೀದಿದಾರರು ಸದರಿ ಮೊತ್ತವನ್ನು ನೇರವಾಗಿ ತಾಲೂಕಾ ಮರಳು ಉಸ್ತುವಾರಿ ಸಮಿತಿ ಸೂಚಿಸುವ ಮರಳು ಪೂರೈಕೆದಾರರಿಗೆ ಪಾವತಿಸಿದ ನಂತರ ಮರಳನ್ನು ಪೂರೈಸುವಲ್ಲಿ ಕ್ರಮ ಜರುಗಿಸಲಾಗುವದು. ಇದರಿಂದಾಗಿ ಸಾಮಾನ್ಯ ನಾಗರೀಕರಿಗೂ ಕೂಡಾ ಯೋಗ್ಯ ದರದಲ್ಲಿ ಮರಳು ಲಬ್ಯವಾಗುವದು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು,” ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಇನ್ನು ಮುಂದೆ ಸಾಂಪ್ರದಾಯಿಕವಾಗಿ ಮರಳು ತೆಗೆಯುವವರು ಅಥವಾ ಸಾಗಾಣಿಕೆದಾರರು ಹೆಚ್ಚಿನ ಬೆಲೆಗೆ ಮರಳು ಮಾರಾಟ ಮಾಡುವದು ಅಥವಾ ಮಾಡಿರುವದು ಕಂಡು ಬಂದಲ್ಲಿ ಅಂತವರ ಪರವಾನಿಗೆಯನ್ನು ತಕ್ಷಣವೇ ರದ್ದುಗೊಳಿಸಲಾಗುವದು. ಯಾರಾದರು ಹೆಚ್ಚಿನ ಬೆಲೆಗೆ ಮರಳು ಮಾರಾಟ ಮಾಡಿದಲ್ಲಿ ಸಾರ್ವಜನಿಕರು ನೇರವಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ದೂರವಾಣಿ ಸಂಖ್ಯೆ -08382.229857 ನೇದಕ್ಕೆ ಅಥವಾ WhatsApp ದೂರು ಸಂಖ್ಯೆ -9483511015 ನೇದಕ್ಕೆ ಅಥವಾ ಆಯಾ ತಾಲೂಕಿಗೆ ಸಂಬಂದಿಸಿದ ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರಿಗೆ ದೂರು ಸಲ್ಲಿಸಬಹುದಾಗಿರುತ್ತದೆ. ಈ ಕುರಿತಂತೆ ಎಲ್ಲಾ ಸಹಾಯಕ ಆಯುಕ್ತರಿಗೆ ಹಾಗೂ ತಹಸೀಲ್ದಾರರಿಗೆ ಈಗಾಗಲೇ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ.