ಉತ್ತರಪ್ರದೇಶ ಯುವತಿಯ ಅತ್ಯಾಚಾರ,ಕೊಲೆ ಖಂಡಿಸಿ ಪ್ರತಿಭಟನೆ
ಮಂಗಳೂರು, ಅ 08: ಉತ್ತರಪ್ರದೇಶದ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆಯನ್ನು ಖಂಡಿಸಿ, ಯೋಗಿ ಆದಿತ್ಯನಾಥ ಸರಕಾರದ ದಬ್ಬಾಳಿಕೆಯನ್ನು ವಿರೋಧಿಸಿ ನಗರದಲ್ಲಿಂದು ದಲಿತ ಹಕ್ಕುಗಳ ಸಮಿತಿ ಹಾಗೂ ಜನವಾದಿ ಮಹಿಳಾ ಸಂಘಟನೆಯ ನೇತ್ರತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಮಹಿಳೆಯರ ಹಾಗೂ ದಲಿತರ ಮೇಲಿನ ದೌರ್ಜನ್ಯವನ್ನು ಪರೋಕ್ಷವಾಗಿ ಸಮರ್ಥಿಸುವ ಕೇಂದ್ರದ ಮೋದಿ ಹಾಗೂ ಉತ್ತರಪ್ರದೇಶದ ಯೋಗಿ ಸರಕಾರದ ವಿರುದ್ದ ಮಹಿಳೆಯರು ಘೋಷಣೆ ಕೂಗಿದರು.
“ಜಾತಿ ವ್ಯವಸ್ಥೆಯನ್ನು ಪೋಷಿಸುವ ಮೇಲ್ವರ್ಗದ ಹಿತಾಸಕ್ತಿಯನ್ನು ಕಾಪಾಡುವ ಸರಕಾರಗಳು ಕೇಂದ್ರದ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ಮೂಲಕ ದೇಶದಲ್ಲಿ ದಲಿತರ,ಮಹಿಳೆಯರ ಹಾಗೂ ಅಲ್ಪಸಂಖ್ಯಾತರ ಮೇಲಿನ ಧಾಳಿಗಳು ವಿಪರೀತವಾಗಿ ಹೆಚ್ಚುತ್ತಿದೆ.ಮಾತೆಯರೆಂದು ಸಂಭೋಧಿಸಿ ಅದೇ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ,” ಎಂದು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ದ.ಕ.ಜಿಲ್ಲಾ ಕಾರ್ಯದರ್ಶಿ ಭಾರತಿ ಬೋಳಾರ ಹೇಳಿದರು.
ದಲಿತ ಹಕ್ಕುಗಳ ಸಮಿತಿಯ ದಕ.ಜಿಲ್ಲಾಧ್ಯಕ್ಷರಾದ ತಿಮ್ಮಯ್ಯ ಕೊಂಚಾಡಿ, ಸಮುದಾಯ ಸಾಂಸ್ಕ್ರತಿಕ ಸಂಘಟನೆಯ ನಾಯಕರಾದ ವಾಸುದೇವ ಉಚ್ಚಿಲ್ ಮಾತನಾಡಿದರು.
ಸಾಮಾಜಿಕ ಚಿಂತಕರಾದ ಪ್ರಮೀಳಾ ದೇವಾಡಿಗ,ಅಶುಂತ ಡಿಸೋಜ ರವರು ಭಾಗವಹಿಸಿದ್ದರು. ಹೋರಾಟದ ನೇತ್ರತ್ವವನ್ನು ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ಕ್ರಷ್ಣ ತಣ್ಣೀರುಬಾವಿ,ರಘುವೀರ್ ಉರ್ವಾಸ್ಟೋರ್,ಸುನೀತಾ, ಬೇಬಿ,ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಜಯಲಕ್ಷ್ಮಿ, ಲೋಲಾಕ್ಷಿ,ಬೇಬಿ ಸೇನವ,ಭವ್ಯ ಮುಚ್ಚೂರು ಮುಂತಾದವರು ವಹಿಸಿದ್ದರು.