ನಾಪತ್ತೆಯೆಯಾಗಿ ನಾಲ್ಕು ದಿನಗಳ ಬಳಿಕ ತೊಂಬತ್ತೆರಡು ವರ್ಷದ ವೃದ್ಧನ ರಕ್ಷಣೆ

ಶ್ವೇತಾ ಎಸ್

ಬೆಳ್ತಂಗಡಿ, ಅ 04: ಮನೆಯಿಂದ ನಾಪತ್ತೆಯಾಗಿದ್ದ 92 ವರ್ಷದ ವ್ಯಕ್ತಿಯನ್ನು ಭಾನುವಾರ ಬೆಳಿಗ್ಗೆ ಕಾಡಿನೊಳಗೆ ಪತ್ತೆ ಮಾಡಲಾಗಿದೆ.
ಮಿತ್ತಬಾಗಿಲು ಗ್ರಾಮದ ಶಾಂತಿ ಗುಡ್ಡೆಯ ಅಣ್ಣು ಪೂಜಾರಿ (92) ನಾಲ್ಕು ದಿನಗಳ ಹಿಂದೆ ತಮ್ಮ ಮನೆಯಿಂದ ಹೋದವರು ಹಿಂದಿರುಗಲಿಲ್ಲ. ಆತಂಕಗೊಂಡ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಮನೆಯ ಬಳಿ ಆತನನ್ನು ಹುಡುಕಲು ಪ್ರಾರಂಭಿಸಿದರೂ ಅವರ ಪ್ರಯತ್ನದಲ್ಲಿ ವಿಫಲರಾದರು.
ಕೆಲವರು ಸುಳಿವು ಪಡೆಯಲು ಹತ್ತಿರದ ಜ್ಯೋತಿಷಿಗಳ ಬಳಿಗೆ ಹೋದರು. ಗ್ರಾಮಸ್ಥರು ವಿವಿಧ ತಂಡಗಳನ್ನು ರಚಿಸಿ ಕೊಲ್ಲಿ ಬಳಿಯ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದರು.
ಆದಿತ್ಯವಾರ ಬೆಳಗ್ಗೆ ಕಾಡುಮನೆ ವಿಜಯ, ವಿನಯ್ ಸೇನರಬೆಟ್ಟು, ರತನ್, ಗಿರೀಶ್ ಹಾಗೂ ಇತರರ ತಂಡ ಅಣ್ಣು ಅವರನ್ನು ಕಾಡುಮನೆ ಬಳಿಯ ಕಾಡಿನಲ್ಲಿ ಒಂದು ಬಂಡೆಯ ಮೇಲೆ ಕುಳಿತಿರುವುದನ್ನು ಕಂಡಿತು.

“ಅವರು ಹೊಳೆಯಲ್ಲಿರುವ ನೀರನ್ನು ಕುಡಿದು ಅಲ್ಲಿಯೇ ಬಳಿಯಲ್ಲಿದ್ದ ಬಂದೆ ಮೇಲೆ ಕುಳಿತಿದ್ದರು. ಅವರ ಅರೋಗ್ಯ ಚೆನ್ನಾಗಿದೆ” ಎಂದು ಮಿತ್ತಬಾಗಿಲು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ವಿನಯ್ ಸೇನರಬೆಟ್ಟು ದಿ ಕೆನರಾ ಪೋಸ್ಟ್ ಗೆ ತಿಳಿಸಿದರು.
“ಅವರ ಮನೆಯಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಕಾಡಿನಲ್ಲಿ ಅವರು ಪತ್ತೆಯಾಗಿದ್ದಾರೆ, ನಾವು ಈಗ ಅವರನ್ನು ಕಾಡಿನಿಂದ ಕರೆತರುತಿದ್ದೇವೆ ಎಂದು ಸ್ಥಳೀಯ ಮೋಹನ್ ಕಿಲ್ಲೂರ್ ಹೇಳಿದರು.