ಜಾನುವಾರುಗಳಿಗೆ ಉಚಿತ ಕಾಲುಬಾಯಿ ಜ್ವರ ಲಸಿಕೆ
ಮಂಗಳೂರು ಅ 01 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ದನ, ಎಮ್ಮೆ, ಹಂದಿಗಳಿಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಪಲ್ಸ್ ಪೋಲಿಯೋ ಮಾದರಿ 17 ನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮ ಅಕ್ಟೋಬರ್ 2 ರಿಂದ 15 ರವರೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿರುವ ಒಟ್ಟು 238000 (ದನ, ಎಮ್ಮೆ, ಹಂದಿ) ಜಾನುವಾರುಗಳಿಗೆ ಉಚಿತವಾಗಿ ಕಾಲುಬಾಯಿ ಜ್ವರ ಲಸಿಕೆಯನ್ನು ಹಾಕಲಾಗುತ್ತದೆ.
ಕಾಲು ಬಾಯಿ ಜ್ವರವು ವೈರಾಣುವಿನಿಂದ ಹರಡುವ ರೋಗವಾಗಿದ್ದು, ರೋಗ ತಗುಲಿದ ನಂತರ ಚಿಕಿತ್ಸೆ ಮತ್ತು ನಿಯಂತ್ರಣ ಕಷ್ಟಸಾಧ್ಯವಾಗಿರುತ್ತದೆ.ಆದುದರಿಂದ ರೋಗವು ಬಾರದ ರೀತಿಯಲ್ಲಿ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಜಾನುವಾರುಗಳಿಗೆ ಲಸಿಕೆಯನ್ನು ಹಾಕುವುದು ಏಕೈಕ ಮಾರ್ಗವಾಗಿರುತ್ತದೆ.
ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿದ್ದರೂ ಸಹ ಪ್ರತಿ 6 ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಿ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ಅವಶ್ಯಕವಾಗಿದೆ.
ಪಶುಪಾಲನಾ ಇಲಾಖೆ ಮತ್ತು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆಯನ್ನು ಹಾಕಲಾಗುವುದು.
ಲಸಿಕಾ ಕಾರ್ಯಕ್ರಮದ ಯಶಸ್ವಿಗಾಗಿ 41-ಪಶುವೈದ್ಯಾಧಿಕಾರಿ ಮತ್ತು 251-ಸಿಬ್ಬಂದಿಯವರನ್ನೊಳಗೊಂಡ ಒಟ್ಟು 34 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡಕ್ಕೆ ಒಂದು ವಾಹನದ ವ್ಯವಸ್ಥೆ ಮಾಡಲಾಗಿದೆ.ಲಸಿಕೆ ಹಾಕುವ ಹಿಂದಿನ ದಿನ ಇಲಾಖೆಯ ಸಿಬ್ಬಂದಿಗಳು ಹಳ್ಳಿಗಳಲ್ಲಿ ಪ್ರಚಾರ ನಡೆಸಲಿರುವರು.
ನಿಗದಿತ ದಿನಾಂಕ ಮತ್ತು ಸಮಯದಂದು ಜಾನುವಾರು ಮಾಲೀಕರು, ರೈತರು ತಾವು ಸಾಕಾಣಿಕೆ ಮಾಡುತ್ತಿರುವ ದನ, ಕರು, ಎಮ್ಮೆ ಮತ್ತು ಹಂದಿಗಳಿಗೆ ಲಸಿಕೆ ಹಾಕಿಸುವುದರಂದಿಗೆ ಕಾಲು ಬಾಯಿ ಜ್ವರ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಹಕರಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.