ಎಂ.ಆರ್.ಪಿ.ಎಲ್ ಮಾಲಿನ್ಯ ನಿಖರ ಪರಿಶೀಲನೆಗೆ ಜಿಲ್ಲಾಧಿಕಾರಿ ಸೂಚನೆ

 ಎಂ.ಆರ್.ಪಿ.ಎಲ್ ಮಾಲಿನ್ಯ ನಿಖರ ಪರಿಶೀಲನೆಗೆ ಜಿಲ್ಲಾಧಿಕಾರಿ ಸೂಚನೆ
Share this post

ಮಂಗಳೂರು ಸೆ 16 : ಜೋಕಟ್ಟೆ ಆಸುಪಾಸಿನಲ್ಲಿ ಎಂ.ಆರ್.ಪಿ.ಎಲ್. ನಿಂದ ಉಂಟಾಗುತ್ತಿರುವ ಶಬ್ದ ಮತ್ತು ವಾಯು ಮಾಲಿನ್ಯದ ನಿಖರ ಪ್ರಮಾಣ ಮಾಡಲು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸೂಚಿಸಿದ್ದಾರೆ.

ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಎಂ.ಆರ್.ಪಿ.ಎಲ್. 3ನೇ ಹಂತದ ಕೋಕ್ ಮತ್ತು ಸಲ್ಫರ್ ಘಟಕದಿಂದ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಸಭೆಯಲ್ಲಿ ಮಾತನಾಡಿದರು.

ಈ ಪ್ರದೇಶದ ಸುತ್ತಮುತ್ತ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಕೂಡಲೇ ಎಂ.ಆರ್.ಪಿ.ಎಲ್. ಈ ಬಗ್ಗೆ ಸ್ಪಂದಿಸಿ, ಜನರ ಅಹವಾಲು ಆಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಕೂಳೂರು – ಜೋಕಟ್ಟೆ ರಸ್ತೆಯಲ್ಲಿ ತೀವ್ರ ಹೊಂಡ ಗುಂಡಿ ಬಿದ್ದಿರುವುದನ್ನು ಈ ರಸ್ತೆಯನ್ನು ಬಳಸುತ್ತಿರುವ ಪ್ರಮುಖ ಕೈಗಾರಿಕಾ ಸಂಸ್ಥೆಗಳಿಂದಲೇ ದುರಸ್ತಿಪಡಿಸುವಂತೆ ಕೆಐಎಡಿಬಿ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಈ ರಸ್ತೆಗೆ ದಾರಿದೀಪ ಅಳವಡಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.

ಅಲ್ಲದೇ, ಈ ರಸ್ತೆಯಲ್ಲಿ ಘನ ವಾಹನಗಳ ಪಾರ್ಕಿಂಗ್‍ನಿಂದ ರಾತ್ರಿ ವೇಳೆ ಅಪಘಾತಕ್ಕೆ ಕಾರಣವಾಗುತ್ತಿರುವುದನ್ನು ತಪ್ಪಿಸಲು ಪಾರ್ಕಿಂಗ್ ನಿಯಂತ್ರಣಕ್ಕೆ ಸ್ಥಳಿಯ ಪೊಲೀಸರಿಗೆ ಸೂಚಿಸಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜೋಕಟ್ಟೆ ಪರಿಸರ ಜನತೆಯ ಅಹವಾಲಿಗೆ ಸೂಕ್ತವಾಗಿ ಸ್ಪಂದಿಸಲಾಗುವುದು ಎಂದು ಹೇಳಿದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಜೋಕಟ್ಟೆ ಸುತ್ತಮುತ್ತ ಮಾಲಿನ್ಯವಾಗುತ್ತಿರುವುದರ ಬಗ್ಗೆ ಸ್ಥಳೀಯರು ಹಲವು ವರ್ಷಗಳಿಂದ ಹೋರಾಡುತ್ತಿದ್ದು, ಸ್ಥಳೀಯರಿಗೆ ತನ್ನ ಬೆಂಬಲವಿದೆ. ಜಿಲ್ಲಾಡಳಿತ ಇಲ್ಲಿನ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

 ಸಭೆಯಲ್ಲಿ ಡಿಸಿಪಿ ಅರುಣಾಂಶ ಗಿರಿ, ಡಿಸಿಎಫ್ ಡಾ. ಕರಿಕಾಲನ್, ಉತ್ತರ ವಿಭಾಗದ ಎಸಿಪಿ ಬೆಳ್ಳಿಯಪ್ಪ,  ಮುಖಂಡರಾದ ಮುನೀರ್ ಕಾಟಿಪಳ್ಳ, ತಾ.ಪಂ. ಸದಸ್ಯ ಬಶೀರ್ ಅಹಮದ್, ಎಂ.ಆರ್.ಪಿ.ಎಲ್. ಮತ್ತು ಎಸ್‍ಇಝಡ್ ಅಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!