ಕಾಫಿ, ಅಡಿಕೆ, ಕಾಳುಮೆಣಸು, ತೆಂಗು ಬೆಳೆಗಾರರ ಸಮಸ್ಯೆ ಆಲಿಸಿದ ಕೇಂದ್ರ ವಿತ್ತ ಸಚಿವರು
ಚಿಕ್ಕಮಗಳೂರೂ, ಸೆ.೦೪: ಮಲೆನಾಡು ಭಾಗಗಳಾದ ಚಿಕ್ಕಮಗಳೂರು, ಹಾಸನ, ಕೊಡಗು ಪ್ರದೇಶಗಳಲ್ಲಿ ಅತಿವೃಷ್ಠಿಯಿಂದಾಗಿ ಕಾಫಿ, ಅಡಿಕೆ, ಕಾಳುಮೆಣಸು, ತೆಂಗು ಸೇರಿದಂತೆ ಹಲವು ಬೆಳೆಗಳು ಹಾನಿಯಾಗಿದ್ದು ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಅವರು ಇಂದು ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಫಿ, ಅಡಿಕೆ, ಕಾಳುಮೆಣಸು, ತೆಂಗು ಬೆಳೆಗಾರರ ಸಮಸ್ಯೆ ಕುರಿತಾದ ಆನ್‌ಲೈನ್ ವಿಡಿಯೋ ಸಂವಾದದಲ್ಲಿ ಮಾತನಾಡಿದರು.
ಜಿಲ್ಲೆಯು ಪರಿಸರ ಸೇರಿದಂತೆ ಹಲವು ವೈವಿದ್ಯತೆಯಿಂದ ಕೂಡಿದ್ದು, ೨೦೧೫ ರಿಂದ ೧೭ ರ ವರೆಗೆ ಮಳೆಯ ಕೊರತೆಯಿಂದಾಗಿ ತೀವ್ರ ಬರಗಾಲದ ಸಮಸ್ಯೆಯಿಂದಾಗಿ ಹಾಗೂ ೨೦೧೮ ರಿಂದ ೧೯ರಲ್ಲಿ ಸುರಿದ ಭಾರಿ ಮಳೆಯ ಅತಿವೃಷ್ಠಿಯಿಂದ ಹಾಗೂ ಈ ಬಾರಿ ಕೋವಿಡ್-೧೯ ಕಾರಣದಿಂದ ಕಾಫಿ, ಮೆಣಸು, ಅಡಿಕೆ ಬೆಳಗಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ ಈ ವಿಷಯವಾಗಿ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದರು.
ಕಾಫಿ ಬೆಳೆಗಾರರ ಆದಾಯ ತೆರಿಗೆಗೆ ಸಂಬಂಧಿಸಿದಂತೆ ರೂಲ್ ೭ಬಿ(೧) ನಿಯಮಾವಳಿ ಪ್ರಕಾರ ಆದಾಯ ತೆರಿಗೆ ಸಲ್ಲಿಸಬೇಕಾಗಿದ್ದು, ಆರ್ಥಿಕ ಹಿಂಜರಿತದಿಂದಾಗಿ ಇದನ್ನು ರದ್ದುಗೊಳಿಸುವಂತೆ ಮಾಡಿರುವ ಮನವಿಗೆ ಸ್ಪಂದಿಸಿದ ಸಚಿವರು ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದರು.
ತೆಂಗು ಬೆಳೆಗಾರರ ಸಮಸ್ಯೆ ಆಲಿಸಿ ಮಾತನಾಡಿದ ಕೇಂದ್ರ ಸಚಿವರು ೨೦೧೫-೧೭ ರವರೆಗೆ ತೀವ್ರ ಬರಗಾಲದಿಂದ ತೆಂಗು ಬೆಳೆ ಹಾಳಾಗಿದ್ದು, ತೆಂಗು ಬೆಳೆಗೆ ಸಂಬಂಧಿಸಿದಂತೆ ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೆಂಗು ಪುನಶ್ಚೇತನ ಹಾಗೂ ನಿಗಧಿತ ಬೆಂಬಲ ಬೆಲೆಗೆ ಕ್ರಮ ವಹಿಸಲಾಗುವುದು ಎಂದರು.
ಪ್ರವಾಸೋದ್ಯಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕಾಫಿ, ಅಡಿಕೆ, ಕಾಳುಮೆಣಸು ಸೇರಿದಂತೆ ಬಹುತೇಕ ಕೃಷಿಕರು ಸಂಕಷ್ಟದಲ್ಲಿದ್ದು, ಕೇಂದ್ರ ಸರ್ಕಾರವು ಬೆಳೆ ವಿಮೆ ಫಸಲು ಭೀಮಾ, ಕಿಸಾನ್ ಸಮ್ಮಾನ್ ಯೋಜನೆ ಹಾಗೂ ರಸಗೊಬ್ಬರ ಸಬ್ಸಿಡಿ ಸೇರಿದಂತೆ ಹಲವು ರೈತ ಪರ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದರು.
ಜಿಲ್ಲೆಯಲ್ಲಿ ಕಾಫಿ ಕೈಗಾರಿಕೋದ್ಯಮ ಅತಿವೃಷ್ಟಿ, ಕೋವಿಡ್-೧೯ ಹಾಗೂ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸಿದೆ, ಇದಕ್ಕೆ ಪರಿಹಾರವಾಗಿ ಕೇಂದ್ರ ವಿತ್ತ ಸಚಿವರು ಸಮಸ್ಯೆಗಳನ್ನು ಆಳವಾಗಿ ಅರಿತಿದ್ದು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದರು.
ವಿಡಿಯೋ ಸಂವಾದದಲ್ಲಿ ವಿಧಾನ ಸಭಾ ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್. ಭೋಜೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಪೂವಿತಾ, ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಹಾಗೂ ಬೆಳೆಗಾರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.