ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆ: ತೆಂಕನಿಡಿಯೂರನಲ್ಲಿ ರಘುಪತಿ ಭಟ್ ಚಾಲನೆ
ಉಡುಪಿ, ಮಾ 12, 2022: ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ತೆಂಕನಿಡಿಯೂರನಲ್ಲಿ ರಘುಪತಿ ಭಟ್ ಚಾಲನೆ ನೀಡಿದರು.
ರಾಜ್ಯ ಸರ್ಕಾರದ ಕಂದಾಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್/ಹಿಸ್ಸಾ ಸ್ಕೆಚ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸುವ ಸಲುವಾಗಿ “ಕಂದಾಯ ದಾಖಲೆ ಮನೆ ಬಾಗಿಲಿಗೆ” ಎಂಬ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಸರ್ಕಾರ ಇಂದಿನಿಂದಲೇ ಈ ಯೋಜನೆಯನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸಲು ತೀರ್ಮಾನಿಸಿರುವುದರಿಂದ ಇಂದು ಮುಖ್ಯ ಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು “ಕಂದಾಯ ದಾಖಲೆ ಮನೆ ಬಾಗಿಲಿಗೆ” ಯೋಜನೆಗೆ ಚಾಲನೆ ನೀಡಿದರು.
ಜಿಲ್ಲಾ ಮಟ್ಟದಲ್ಲಿ ಈ ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆ ಉಡುಪಿ ತಾಲ್ಲೂಕಿನ ತೆಂಕನಿಡಿಯೂರು ಗ್ರಾಮದ ಲಕ್ಷ್ಮೀ ನಗರದ ರೈತರ ಮನೆಗೆ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಂದಾಯ ದಾಖಲೆಗಳನ್ನು ವಿತರಿಸುವ ಮೂಲಕ “ಕಂದಾಯ ದಾಖಲೆ ಮನೆ ಬಾಗಿಲಿಗೆ” ಯೋಜನೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷರಾದ ಅರುಣ್ ಜತ್ತನ್, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಕಂದಾಯ ನಿರೀಕ್ಷಕ ಉಪೇಂದ್ರ ಹಾಗೂ ತೆಂಕನಿಡಿಯೂರು ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.