ಹೊಸ ಅಂಗಡಿಗಳಿಗೆ ಪರವಾನಗಿ ನೀಡಲು ನಿರ್ಬಂಧ
ಕಾರವಾರ ಜುಲೈ 16, 2021: ನಗರದ ಸ್ವಚ್ಛತೆಯ ಹಿತದೃಷ್ಠಿಯಿಂದ ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚುವರಿ ಅಂಗಡಿಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಯಾವುದೇ ಹೊಸ ತಳ್ಳುಗಾಡಿ, ಪೆಟ್ಟಿಗೆ ಅಂಗಡಿ ಅಥವಾ ಗೂಡಂಗಡಿ ಇಡಲು ಪರವಾನಗಿ ನೀಡುತ್ತಿಲ್ಲ ಎಂದು ನಗರಸಭೆ ಪೌರಾಯುಕ್ತ ಆರ್.ಪಿ. ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಸಭೆ ವ್ಯಾಪ್ತಿಯ ಖಾಯಂ ತಳ್ಳುಗಾಡಿ, ಪೆಟ್ಟಿಗೆ ಅಂಗಡಿ ಹಾಗೂ ಗೂಡಂಗಡಿಗಳಿಗೆ ಈಗಾಗಲೇ ನಗರಸಭೆಯಿಂದ ಬೀದಿ ಬದಿ ಅಂಗಡಿ ನಂಬರ್ ನೀಡಲಾಗಿದೆ. ಈ ನಂಬರ್ ಪಡೆದ ಅಂಗಡಿದಾರರು ಅಂಗಡಿ ಸಂಖ್ಯೆ ಕಾಣುವಂತೆ ಹಾಕಬೇಕು. ತಪ್ಪಿದ್ದಲ್ಲಿ ಅಂತಹ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.
ಯಾವುದೇ ಹೊಸ ತಳ್ಳುಗಾಡಿ, ಪೆಟ್ಟಿಗೆ ಅಂಗಡಿ ಅಥವಾ ಗೂಡಂಗಡಿಗಳನ್ನು ಇಡಲು ಅವಕಾಶವಿಲ್ಲ. ಒಂದುವೇಳೆ ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಹೆಚ್ಚುವರಿ ಹಾಗೂ ನಂಬರ್ ಇಲ್ಲದ ಬೀದಿ ಬದಿ ಅಂಗಡಿಗಳು ಕಂಡು ಬಂದಲ್ಲಿ ಅಂತಹ ಅಂಗಡಿಗಳನ್ನು ಯಾವುದೇ ಮುಸ್ಸೂಚನೆ ನೀಡದೆ ನಗರಸಭೆ ವಶಕ್ಕೆ ಪಡೆಯಲಾಗುತ್ತದೆ ಎಂದಿದ್ದಾರೆ.