ಏಪ್ರಿಲ್ 16 ರಂದು ರಾಷ್ಟೀಯ ಜಂತುಹುಳು ನಿವಾರಣಾ ದಿನ ಆಚರಣೆ
ಕಾರವಾರ, ಏಪ್ರಿಲ್ 13, 2021: ಎರಡು ವರ್ಷದೊಳಗಿನ ಮಗುವಿನಿಂದ ಹಿಡಿದು 19 ವರ್ಷದೊಳಗಿನವರಲ್ಲಿ ಕಂಡುಬರುವ ಜಂತುಹುಳುವಿನ ಬಾಧೆ ನಿಯಂತ್ರಿಸುವ ಉದ್ದೇಶದಿಂದ ಜಿಲ್ಲೆಯಲ್ಲಿಏಪ್ರಿಲ್ 16 ರಂದು ‘ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ’ ಆಚರಿಸಲಾಗುತ್ತದೆ ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ್ ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರ ಸೂಚಿಸಿರುವಂತೆ ಈ ವರ್ಷ ಏಫ್ರಿಲ್ 16ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಆಚರಿಸಲಾಗುತ್ತಿದ್ದು, 1 ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅಲ್ಬೆಂಡೋಜಾಲ್ 400mg ಅರ್ಧ ಮಾತ್ರೆ ಹಾಗೂ 2 ವರ್ಷ ಮೇಲ್ಪಟ್ಟು 19 ವರ್ಷದೊಳಗಿನ ವಯೋ ಗುಂಪಿನವರಿಗೆ 1 ಮಾತ್ರೆ ನೀಡಿ ಅವರಲ್ಲಿ ಕಂಡು ಬರುವ ಜಂತುಹುಳುವಿನ ಬಾಧೆ ನಿಯಂತ್ರಿಸಿ ಅಪೌಷ್ಟಿಕತೆ, ರಕ್ತಹೀನತೆ ಹೊಗಲಾಡಿಸುವುದು. ಮಾನಸಿಕ ಮತ್ತುದೈಹಿಕ ಬೆಳವಣಿಗೆಯಲ್ಲಿ ನ್ಯೂನ್ಯತೆ ನಿವಾರಿಸುವುದು. ನ್ಯೂನ್ಯತೆ ನಿವಾರಿಸಿ ಪೌಷ್ಟಿಕತೆ ಹೆಚ್ಚಿಸಿ ಉತ್ತಮ ಶಿಕ್ಷಣ ಪಡೆಯಲು ಹಾಗೂ ಜೀವನದಲ್ಲಿ ಗುಣಮಟ್ಟವನ್ನು ಹೆಚ್ಚಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.
ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಮಾಜಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಹಯೋಗದೊಂದಿಗೆ ಪ್ರತಿವರ್ಷ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಶಾಲೆಯಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿರುವ ಮಕ್ಕಳಿಗೆ ಮತ್ತು ವಸತಿ ನಿಲಯದಲ್ಲಿರುವ ಮಕ್ಕಳಿಗೆ, ಶಾಲೆ ಹಾಗೂ ಅಂಗನವಾಡಿಗಳಿಂದ ಹೊರಗುಳಿದಿರುವ ಮಕ್ಕಳಿಗೆ ಆಶಾ ಕಾರ್ಯಕರ್ತೆಯರ ಮೂಲಕ ಮಾತ್ರೆ ನೀಡಲಾಗುತ್ತದೆ. ಈಗಾಗಲೇ ಶಿರಸಿಯ ಜಿಲ್ಲಾಔಷಧಿ ಉಗ್ರಾಣದಿಂದ ಮಾತ್ರೆಗಳು ಪೂರೈಕೆಯಾಗಿದ್ದು, ಎಲ್ಲ ತಾಲೂಕುಗಳಿಗೆ ಮಾತ್ರೆಗಳನ್ನು ವಿತರಿಸಲಾಗಿದೆ..
ಕೋವಿಡ್-19 ಹಿನ್ನಲೆಯಲ್ಲಿಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಇರುವುದರಿಂದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಮಾತ್ರೆಗಳನ್ನು ಫಲಾನುಭವಿಗಳಿಗೆ ನೀಡಲಿದ್ದಾರೆ. 1 ರಿಂದ 2 ವರ್ಷದೊಳಗಿನ ಮಕ್ಕಳಿಗೆ ಮಾತ್ರೆಗಳನ್ನು ಪುಡಿ ಮಾಡಿ ಶುದ್ಧ ನೀರಿನಲ್ಲಿ ಬೆರೆಸಿ ಸೇವಿಸುವಂತೆಯೂ, ಉಳಿದವರಿಗೆ ಚೀಪುವುದರ ಮೂಲಕ ಮಾತ್ರೆ ಸೇವಿಸುವಂತೆ ಕ್ರಮ ವಹಿಸಲಾಗಿದೆ.
ಜೊತೆಗೆ ಕೋವಿಡ್-19 ಹಿನ್ನಲೆಯಲ್ಲಿಅಂಗನವಾಡಿ ಮತ್ತು ಶಾಲೆಗಳಿಗೆ ರಜೆಯಿದ್ದು, ಎಲ್ಲ್ಲತಾಲೂಕಿನ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯ ಎಲ್ಲ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಯಶಸ್ವಿಗೊಳಿಸಬೇಕೆಂದು ಅವರು ಸೂಚಿಸಿರುತ್ತಾರೆ.
ಜಿಲ್ಲೆಯಲ್ಲಿಒಟ್ಟು 3,51,093 ಫಲಾನುಭವಿಗಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡಲಾಗುತ್ತಿದೆ. ಈ ಪೈಕಿ ಕಾರವಾರ ತಾಲೂಕಿನಲ್ಲಿ 27824, ಅಂಕೋಲಾ 22605, ಕುಮಟಾ 36866, ಹೊನ್ನಾವರ 31874, ಭಟ್ಕಳ 47880, ಶಿರಸಿ 47406, ಸಿದ್ದಾಪುರ 20864, ಯಲ್ಲಾಪುರ 18025, ಮುಂಡಗೋಡ 32030, ಹಳಿಯಾಳ 52014 ಹಾಗೂ ಜೋಯಿಡಾ 13705 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 3,51,093 ಫಲಾನುಭವಿಗಳಿಗೆ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಡಿಹೆಚ್ಒ ಹೇಳಿದ್ದಾರೆ.