ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಆದೇಶ: ಡಾ.ರಾಜೇಂದ್ರ ಕೆ.ವಿ
ಮಂಗಳೂರು, ಎಪ್ರಿಲ್ 09, 2021: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ – 73 (ಹಳೆ ರಾ.ಹೆ- 234) ಮಂಗಳೂರು –ವಿಲ್ಲುಪುರಂ ರಸ್ತೆಯ ಕಿ.ಮೀ. 76.00 ರಿಂದ ಕಿ.ಮೀ. 86.20 ರ ವರೆಗೆ ಚಾರ್ಮಾಡಿ ಘಾಟ್ ರಸ್ತೆಯ ಮಾರ್ಗದಲ್ಲಿ ಕೆಲವು ನಿಬಂಧನೆಗಳಿಗೆ ಒಳಪಟ್ಟು ದಿನದ 24 ಗಂಟೆಗಳ ಕಾಲ ಲಘು ಹಾಗೂ ಕೆಲವು ಘನ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಆದೇಶಿಸಲಾಗಿದೆ.
ಎಲ್ಲಾ ರೀತಿಯ ಭಾರೀ ವಾಹನಗಳ (ಗುಂಪು-ಬಿ ವಾಹನಗಳ) ಸಂಚಾರವನ್ನು ನಿರ್ಬಂಧಿಸಿ ಮೋಟಾರು ವಾಹನ ಕಾಯಿದೆ 1988ರ ಸೆಕ್ಷನ್ 115 ಹಾಗೂ 1989ರ ನಿಯಮ 221(ಎ)(5) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಎಪ್ರಿಲ್ 9 ರಿಂದ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದೇಶಿಸಿದ್ದಾರೆ.
ಸಂಚರಿಸಬಹುದಾದ ಲಘು ವಾಹನಗಳು (ಗುಂಪು-ಎ): ಸಾರ್ವಜನಿಕರು ಸಂಚರಿಸುವ ಕೆ.ಎಸ್.ಆರ್.ಟಿ.ಸಿ ಕೆಂಪು ಬಸ್ಸು, ಆರು ಚಕ್ರದ ಲಾರಿ, ನಾಲ್ಕು ಚಕ್ರದ ವಾಹನಗಳು, ಟೆಂಪೋ ಟ್ರಾವೆಲ್ಲರ್ಸ್, ಆಂಬುಲೆನ್ಸ್ , ಕಾರು, ಜೀಪು, ವ್ಯಾನ್, ಎಲ್ ಸಿ ವಿ (ಮಿನಿ ವ್ಯಾನ್) ಹಾಗೂ ದ್ವಿಚಕ್ರ ವಾಹನಗಳು.
ನಿರ್ಬಂಧಿಸಲಾದ ಭಾರಿ ವಾಹನಗಳು(ಗುಂಪು-ಬಿ): ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್ ಹಾಗೂ ಲಾಂಗ್ ಚಾಸೀಸ್ ವಾಹನಗಳು , ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಟ್ರಕ್ ಟ್ರೈಲರ್, ಕೆ.ಎಸ್.ಆರ್.ಟಿ.ಸಿ ರಾಜಹಂಸ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಣೆ ವಾಹನಗಳು.
ಈ ಅಧಿಸೂಚನೆಯ ಅನ್ವಯ ಸದ್ರಿ ರಸ್ತೆಯಲ್ಲಿ ಅವಶ್ಯವಿರುವ ಸೂಚನಾ ಫಲಕ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಜಿಲ್ಲೆಯ ಪೋಲೀಸ್ ಅಧೀಕ್ಷಕರು, ಮೋಟಾರು ವಾಹನ ಕಾಯಿದೆ 1988 ಸೆಕ್ಷನ್ 116 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಾವಳಿ 1989ರ ನಿಯಮ 221ಎ(2) ರ ಪ್ರಕಾರ ಅಧಿಕಾರವುಳ್ಳವರಾಗಿರುತ್ತಾರೆ.