ಕೆ ಎಸ್ ಆರ್ ಟಿ ಸಿ ಮುಷ್ಕರ: ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್ ಸಂಚಾರಕ್ಕೆ ಡಿಸಿ ಸೂಚನೆ
ಕಾರವಾರ ಏಪ್ರಿಲ್ 6, 2021: ಕೆ ಎಸ್ ಆರ್ ಟಿ ಸಿ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಬಸ್ಗಳನ್ನು ಓಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೆ ಎಸ್ ಆರ್ ಟಿ ಸಿ ಹಾಗೂ ಆರ್ ಟಿ ಓ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ಎಂ.ಪಿ. ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಕೆ ಎಸ್ ಆರ್ ಟಿ ಸಿ, ಸಾರಿಗೆ ಇಲಾಖೆ ಹಾಗೂ ವಿವಿಧ ಖಾಸಗಿ ವಾಹನಗಳ ಸಂಸ್ಥೆಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏ. 7ರಿಂದ ರಾಜಾದ್ಯಂತ ಕೆ ಎಸ್ ಆರ್ ಟಿ ಸಿ ನೌಕಕರು ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ತಿರ್ಮಾನಿಸಿದ್ದು, ಇದರ ಮಧ್ಯೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಸ್ಗಳ ಸಂಚಾರಕ್ಕೆ ಕೆ ಎಸ್ ಆರ್ ಟಿ ಸಿ ಹಾಗೂ ಆರ್ ಟಿ ಓ ಅಧಿಕಾರಿಗಳು ಕೈಗೊಂಡ ಮುನ್ನೆಚರಿಕೆ ಕ್ರಮಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.
ಮುಷ್ಕರದ ಕಾರಣ ಜನರಿಗೆ ತೊಂದರೆ ಆಗುವ ಸಾಧ್ಯತೆಯಿದೆ. ಹೀಗಾಗಿ ಕೆ ಎಸ್ ಆರ್ ಟಿ ಸಿ ಹಾಗೂ ಆರ್ ಟಿ ಓ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಮಾಡಿಕೊಂಡು ಪೊಲೀಸ್ ಭದ್ರತೆಯಲ್ಲಿ ಬಸ್ಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು.
ಒಂದುವೇಳೆ ಕೆ ಎಸ್ ಆರ್ ಟಿ ಸಿ ಬಸ್ಗಳ ಲಭ್ಯವಿಲ್ಲದಿದ್ದಲ್ಲಿ ಜನರ ಸಂಚಾರಕ್ಕೆ ಅಗತ್ಯವಿರುವಲ್ಲಿ ಖಾಸಗೀಯ ಮ್ಯಾಕ್ಸಿ ಕ್ಯಾಬ್, ಟೆಂಪೋ ಟ್ರಾವೆಲ್ಸ್ ಬಳಸಬೇಕು. ಸಾರ್ವಜನಿಕರ ಹಿತದೃಷ್ಠಿಯಿಂದ ಖಾಸಗಿ ವಾಹನಗಳ ಸಂಚಾರಕ್ಕೆ ಆರ್ಟಿಓ ಅಧಿಕಾರಿಗಳು ತಾತ್ಕಾಲಿಕ ಸಂಚಾರ ಪರವಾನಗಿ ನೀಡಬೇಕು ಎಂದರು.
ಹೋರಾಟ, ಪ್ರತಿಭಟನೆ, ಮುಷ್ಕರ ನಡೆಸಲು ಪ್ರತಿಯೊಬ್ಬರಿಗೂ ಕಾನೂನಿನಲ್ಲಿ ಅವಕಾಶವಿದೆ. ಹಾಗಂತ ಎಲ್ಲೆಮೀರಿ ನಡೆದುಕೊಳ್ಳುವುದು ಸರಿಯಾದ ಬೆಳವಣಿಗೆಯಲ್ಲ. ಹೀಗಾಗಿ ಯಾವುದೇ ಅಹಿತಕರ ಘಟನೆಗಳನ್ನು ನಡೆಸದಂತೆ ಕಾನೂನು ಚೌಕಟ್ಟಿನಲ್ಲಿ ಮುಷ್ಕರವಿರಬೇಕು. ಯಾರಾದರೂ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕ ಆಸ್ತ್ತಿಪಾಸ್ತಿಗೆ ಹಾನಿಯನ್ನುಂಟು ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾತನಾಡಿ, ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕರ ಹಾಗೂ ವಾಹನಗಳ ಮುಕ್ತ ಸಂಚಾರಕ್ಕೆ ಪ್ರತಿಯೊಬ್ಬರೂ ಅನುವು ಮಾಡಿಕೊಡಬೇಕು. ಒಂದುವೇಳೆ ಮುಷ್ಕರದ ನೆಪದಲ್ಲಿ ಸಾರ್ವಜನಿಕರು, ವಾಹನ ಸವಾರರು, ಸಾರಿಗೆ ಸಂಸ್ಥೆಯ ವಾಹನಗಳಿಗೆ ಯಾರಾದರೂ ತೊಂದರೆ ಮಾಡಿದರೆ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆ ಎಸ್ ಆರ್ ಟಿ ಸಿ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 290 ಬಸ್ಗಳನ್ನು ಓಡಿಸಲಾಗುತ್ತಿದ್ದು, ನೌಕರರ ಮುಷ್ಕರದ ಹಿನ್ನಲೆಯಲ್ಲಿ ಈ ಎಲ್ಲ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಕಾಣಬಹುದಾಗಿದೆ. ಆದರೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದಂತೆ ಕೆ ಎಸ್ ಆರ್ ಟಿ ಸಿ ನೌಕರರ ಲಭ್ಯತೆಯನ್ನ ನೋಡಿಕೊಂಡು ಅವಶ್ಯಕತೆಗೆ ಅನುಗುಣವಾಗಿ ಬಸ್ಗಳನ್ನು ಓಡಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ., ಕಾರವಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ಕೆ ಎಸ್ ಆರ್ ಟಿ ಸಿ ಹಾಗೂ ಖಾಸಗಿ ವಾಹನಗಳ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.