ಶ್ರೀ ಮಂಗಳಾದೇವಿ ದೇವಸ್ಥಾನ: ಇಂದು ಬಯನ ಬಲಿ ಉತ್ಸವದ ಕೊನೆಯ ದಿನ
ಭಕ್ತ ವತ್ಸಲೆಯಾಗಿ ಮೆರೆಯಲ್ಪಡುವ ಶ್ರೀ ಮಂಗಳಾದೇವಿ ಅಮ್ಮನಿಗೆ ವಾರ್ಷಿಕ ಜಾತ್ರಾ ಮಹೋತ್ಸವದ ಫಾಲ್ಗುಣ ಕೃಷ್ಣ ನಾಲ್ಕನೇಯ ದಿನವಾದ ಇಂದಿನ ಷಷ್ಠಿಯ ಶುಕ್ರವಾರದಂದು ಚತುರ್ಥ ದಿನದ ಉತ್ಸವ.
ಮಹಾದೇವಿಯ ಕಂಠ – ವಕ್ಷಸ್ಥಳಗಳಲ್ಲಿ ಸರ್ವಾಭರಣ ಪುಷ್ಪಮಾಲೆಗಳು ರಾರಾಜಿಸುತ್ತಿದ್ದು ದ್ರಾಕ್ಷಿ ನೇರಳೆ ವರ್ಣದ ಸೀರೆಯನ್ನು ಧರಿಸಿ ಸರ್ವಾಭರಣ ಭೂಷಿತೆಯಾಗಿ ಶೋಭಿಸುತ್ತಾ ಅಭಯ ವರದ ಹಸ್ತಗಳಾಗಿ, ತನ್ನ ಪಾರ್ಶ್ವ ಹಸ್ತದಲ್ಲಿ ಗದೆಯನ್ನು, ವಾಮ ಹಸ್ತದಲ್ಲಿ ಪರಶುವನ್ನು ಧರಿಸಿ ಧನುರ್ಭಾಣ ಪಾಣಿಯಾಗಿ ಮಹಾದೇವಿಯು ಸಿಂಹಾರೋಹಣಗೈದು ವೈಭವಿತಳಾಗಿದ್ದಾಳೆ.
ಇಂದು ಶ್ರೀ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವದ ಬಯನ ಬಲಿ ಉತ್ಸವದ ಕೊನೆಯ ದಿನ. ಸಾಯಂಕಾಲ ೬.೩೦’ಕ್ಕೆ ಬಲಿ ಹೊರಟು ತಂತ್ರವು ನೆರವೇರಿ ದೇವಳದ ರಾಜಾಂಗಣದಲ್ಲಿ ವೈಶಿಷ್ಠ್ಯಪೂರ್ಣ ಉಡುಕೆ ಸುತ್ತು, ಚೆಂಡೆ ಸುತ್ತು, ಸ್ಯಾಕ್ಸೋಫೋನ್ ಸುತ್ತು, ಬ್ಯಾಂಡ್ ವಾದ್ಯಾದಿ ಸುತ್ತುಗಳೊಂದಿಗೆ ವಿಶೇಷವಾಗಿ ಇಂದು ಯಕ್ಷಗಾನ ಸುತ್ತು ಹಾಗೂ ಸಣ್ಣಭಂಡಿ ಸುತ್ತಿನ ಉತ್ಸವಗಳು ನಡೆಯಲಿದೆ.
ರಾಜೋಲ್ಲಾಸದಿಂದ ನಾಗಸ್ವರದ ವಿಶೇಷ ಸ್ವರ ನಾದ-ವಿನೋದದ ಆಲಾಪದಲ್ಲಿ ಉಡುಕೆ, ಚೆಂಡೆ, ಡೋಲು, ತಾಳಗಳ ಹಿಮ್ಮೇಳದಲ್ಲಿ ಸ್ವರ ತರಂಗಳ ಕರ್ಣಾಕರ್ಷಕ ನಿನಾದವು ಮಾರ್ದನಿಸುತ್ತಿರಲು ನಮ್ಮ ಶ್ರೀ ಕ್ಷೇತ್ರವೇ ವರ್ಣರಂಜಿತವಾಗಿ ಝೇಂಕರಿಸಲ್ಪಡುತ್ತಿದೆ.
ರಾಜ ವೈಭವದಲ್ಲಿ ವಿವಿಧ ವಾಧ್ಯಘೋಷಾದಿಗಳು… ಸಿಂಹ ದಂಡ, ಛತ್ರ ಚಾಮರ, ಬಿರುದಾವಳಿಯ ಸಹಿತ ವೖೆಭವದಿಂದ ಎರಡೂ ಬದಿಯ ದೀವಟಿಕೆಗಳ ಬೆಳಕಿನಲ್ಲಿ ಶ್ರೀ ದೇವಿಯು ಬಲಿಯ ಉತ್ಸವದಲ್ಲಿ ತನ್ನ ಭಕ್ತರ ಸಂಗಡ ತನ್ನ ದೇವಾಲಯದಲ್ಲಿ ಮೆರೆಯಲ್ಪಡುವ ಮಹಾ ಸಮ್ಮೇಳನವಾದ ಬಯನ ಬಲಿ ಉತ್ಸವವನ್ನು ಕಣ್ತುಂಬಿಕೊಂಡು ಧನ್ಯತಾ ಭಾವದೊಂದಿಗೆ ಆ ಮಹಾ ತಾಯಿಯನ್ನು ಭಕ್ತಿಭಾವದಲ್ಲಿ ಕಂಡು ಕೈಮುಗಿದು ಶರಣೆನುವ ಆ ಸಂದರ್ಭವು ಮಾತಿಗೆ ನಿಲುಕದ್ದಾಗಿದ್ದು ಇಂದಿನ ಕೊನೆಯ ಬಯನ ಬಲಿ ಉತ್ಸವವು ಸಾಕ್ಷಿಯಾಗಲಿದೆ.
ಸಕಲಾನಿಷ್ಠ ನಿವರ್ತಕಳಾದ ಮಂಗಳಾದೇವಿಯು ಪರಮ ಮಂಗಳವನ್ನು ದಯ ಪಾಲಿಸಿನಿರ್ವ್ಯಾಜ ಕರುಣೆಯಿಂದ ನಮ್ಮೆಲ್ಲರನ್ನು ಉದ್ಧರಿಸಲಿ