ದೋಷಗಳಿಲ್ಲದ ಮತದಾರರ ಪಟ್ಟಿ ಸಿದ್ಧಪಡಿಸಿ: ಕೂರ್ಮಾರಾವ್
ಉಡುಪಿ, ಡಿ 05, 2021: ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ, ಯಾವುದೇ ಗೊಂದಲ ಹಾಗೂ ದೋಷಗಳಿಲ್ಲದ ಶುದ್ಧ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು.
ಅವರು ಶನಿವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ತೊಡಗಿರುವ ಉಡುಪಿ ಮತ್ತು ಕಾಪು ತಾಲೂಕಿನ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಜನವರಿ 1, 2022 ಕ್ಕೆ 18 ವರ್ಷ ಪೂರ್ಣಗೊಳ್ಳುವ ಎಲ್ಲಾ ಅರ್ಹ ಮತದಾರರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಕ್ಷೇತ್ರದಿಂದ ಹೊರ ಹೋದವರು ಮತ್ತು ಮರಣ ಹೊಂದಿದವರ ಹೆಸರುಗಳನ್ನು ಆ ಕ್ಷೇತ್ರ್ರದ ಮತಗಟ್ಟೆಯ ಮತದಾರರ ಪಟ್ಟಿಯಿಂದ ಕೈ ಬಿಡುವಂತೆ ತಿಳಿಸಿದರು.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈ ಬಿಡುವ ಮುನ್ನ ಮತ್ತೊಮ್ಮೆ ಆ ಮನೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ದೃಢಡಿಸಿಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ ಮತದಾರರ ಪಟ್ಟಯಲ್ಲಿ ತಪ್ಪುಗಳಿದ್ದರೆ ಚುನಾವಣೆಯ ಮತದಾನ ದಿನದಂದು ಗೊಂದಲ, ಗಲಾಟೆಗಳು ಸಂಭವಿಸಲಿದ್ದು ಇದರಿಂದ ಮುಕ್ತ, ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಅಡ್ಡಿಯಾಗುತ್ತದೆ ಎಂದರು.
ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರ ಪಾತ್ರ ಅತ್ಯಂತ ಪ್ರಾಮುಖ್ಯತೆ ಹೊಂದಿದ್ದು ಅರ್ಹ ಎಲ್ಲಾ ಮತದಾರರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು ಹಾಗೂ ಅನರ್ಹ ಮತದಾರರನ್ನು ಪಟ್ಟಿಯಿಂದ ತೆಗೆಯಬೇಕು. ಮತಗಟ್ಟೆ ವ್ಯಾಪ್ತಿಯಲ್ಲಿ 18 ವರ್ಷ ಪೂರ್ಣಗೊಂಡ ಎಲ್ಲಾ ಯುವಕ ಯುವತಿಯರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದರ ಮೂಲಕ ಜಿಲ್ಲೆಯಲ್ಲಿ 100% ಶುದ್ಧ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ ಲಸಿಕಾ ಮಿತ್ರ ಕಾರ್ಯಕ್ರಮದ ಮೂಲಕ ಮತದಾರರ ಪಟ್ಟಿಯನ್ನು ಉಪಯೋಗಿಸಿಕೊಂಡು ಕೋವಿಡ್ ಲಸಿಕೆ ಪಡೆಯಲು ಅರ್ಹರಿರುವ 18 ವರ್ಷ ಮೇಲ್ಪಟ್ಟ ಸಾರ್ವಜನಿಕರು, ಮೊದಲ ಡೋಸ್ ಪಡೆದ ನಾಗರೀಕರು, 2 ನೇ ಡೋಸ್ ಪಡೆದ ಮತ್ತು ಪಡೆಯದ ನಾಗರೀಕರು, ಲಸಿಕೆ ಪಡೆಯದ ನಾಗರೀಕರನ್ನು ಈಗಾಗಲೇ ಗುರುತಿಸಲಾಗಿದೆ.
ಎಲ್ಲಾ ಬಿ.ಎಲ್.ಓ ಗಳು ಮತದಾರರ ಪಟ್ಟಿ ಪರಿಶೀಲನೆ ಸಂದರ್ಭದಲ್ಲಿ ತಮ್ಮ ಗ್ರಾಮಗಳಲ್ಲಿನ ಲಸಿಕೆ ಪ್ರಗತಿ ಕುರಿತು ಮಾಹಿತಿಯನ್ನು ಪರಿಶೀಲಿಸಿ ಎಲ್ಲರೂ ತಪ್ಪದೇ ಲಸಿಕೆ ಪಡೆಯುವಂತೆ ಮನವೊಲಿಸುವುದರ ಮೂಲಕ ಜಿಲ್ಲೆಯಲ್ಲಿ 100% ಲಸಿಕೆ ನೀಡಿ, ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸಲು ಕಾರ್ಯನಿರ್ವಹಿಸಬೇಕು ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಸಂಬಂಧಪಟ್ಟ ಗ್ರಾಮ ವ್ಯಾಪ್ತಿಯ ಕಂದಾಯ ನಿರೀಕ್ಷಕರು ಮತ್ತು ಬಿ.ಎಲ್.ಓ ಗಳು ಜಂಟಿಯಾಗಿ ತಪಾಸಣೆ ನಡೆಸಬೇಕು. ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ 100% ಲಸಿಕಾಕರಣವಾಗುವಂತೆ ನೋಡಿಕೊಳ್ಳಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸುವ ಸಿಬ್ಬಂದಿಯನ್ನು, ಮತದಾರರ ದಿನದಂದು ನಡೆಯುವ ಕಾರ್ಯಕ್ರಮದಲ್ಲಿ ಸೂಕ್ತ ರೀತಿಯಲ್ಲಿ ಅಭಿನಂಧಿಸಲಾಗುವುದು ಎಂದರು.
ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್, ಕಾಪು ತಹಸೀಲ್ದಾರ್ ಶ್ರೀನಿವಾಸ ಮೂರ್ತಿ, ಜಿಲ್ಲಾ ಕೋವಿಡ್ ಲಸಿಕಾ ಅಧಿಕಾರಿ ಡಾ.ಎಂ.ಜಿ.ರಾಮ ಉಪಸ್ಥಿತರಿದ್ದರು.