ಮಲ್ಪೆ ಸಮುದ್ರ ಮಧ್ಯೆ ಕಾನೂನು ಅರಿವು ಕಾರ್ಯಕ್ರಮ
ಉಡುಪಿ, ನ 03, 2021: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೋಲಿಸ್ ಇಲಾಖೆ, ಜಿಲ್ಲಾ ವಕೀಲರ ಸಂಘ (ರಿ) ಉಡುಪಿ ವತಿಯಿಂದ ಇಂದು ಮಲ್ಪೆಯ ಪ್ರವಾಸಿ ಜೆಟ್ಟಿಯಿಂದ ಸೈಂಟ್ ಮೇರಿಸ್ ಐಲ್ಯಾಂಡ್ಗೆ ತೆರಳುವ ದೋಣಿಯಲ್ಲಿ, ಸಮುದ್ರ ಮಧ್ಯದಲ್ಲಿ, ದೋಣಿಯಲ್ಲಿದ್ದ ಪ್ರಯಾಣಿಕರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಮಾತನಾಡಿ, ಪ್ರತಿಯೊಬ್ಬ ಸಾರ್ವಜನಿಕರೂ ಕಾನೂನಿನ ಕುರಿತು ಸಾಮಾನ್ಯ ಜ್ಞಾನವನ್ನಾದರೂ ಹೊಂದುವುದು ಅತ್ಯಂತ ಅಗತ್ಯ, ಈ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಎಲ್ಲೆಡೆ ಅರಿವು ಕಾರ್ಯಕ್ರಮಗಳನ್ನು ಅಯೋಜಿಸುತ್ತಿದ್ದು, ಇದೇ ಮೊದಲ ಬಾರಿಗೆ ಸಮುದ್ರದ ಮಧ್ಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಸಾರ್ವಜನಿಕರು ತಮ್ಮ ಕಾನೂನು ಸಮಸ್ಯೆಗಳನ್ನು ಲೋಕ ಅದಾಲತ್ ಮೂಲಕ ಅತ್ಯಂತ ಸುಲಭವಾಗಿ ಬಗೆಹರಿಸಿಕೊಳ್ಳಬಹುದಾಗಿದ್ದು, ಪ್ರಕರಣಗಳಲ್ಲಿ ರಾಜೀಯಾಗಲು ಸಹ ಇದರಲ್ಲಿ ಅವಕಾಶವಿದೆ ಅಲ್ಲದೇ ಆರ್ಥಿಕ ದುರ್ಬಲರು, ಮಹಿಳೆಯರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ನೆರವು ಪಡೆಯಬಹುದಾಗಿದ್ದು, ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಲೋಕ ಅದಾಲತ್ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಧ್ಯೇಯ ಗೀತೆಗಳ ಮೂಲಕ ಸಹ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಮಲ್ಪೆ ಪೊಲೀಸ್ ಠಾಣೆಯ ಪಿ ಎಸ್ ಐ ಶಕ್ತಿವೇಲು, ಹಿರಿಯ ವಕೀಲೆ ಹಾಗೂ ಬಾಲನ್ಯಾಯ ಮಂಡಳಿ ಸದಸ್ಯೆ ಅಮೃತಕಲಾ, ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.