ನವೆಂಬರ್ 1 ರಿಂದ ಬಾಲ ಕಾರ್ಮಿಕರ ಸಮೀಕ್ಷೆ: ಕೂರ್ಮಾರಾವ್ ಎಂ
ಉಡುಪಿ, ಅ 23, 2021: ಜಿಲ್ಲೆಯಲ್ಲಿ ನವೆಂಬರ್ 1 ರಿಂದ ಬಾಲ ಕಾರ್ಮಿಕರು ಮತ್ತು ಕಿಶೋರ ಕಾರ್ಮಿಕರ ಸಮೀಕ್ಷೆ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ ನಡೆದ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲಕಾರ್ಮಿಕರು ಕೆಲಸದಲ್ಲಿ ತೊಡಗಿಕೊಳ್ಳುವುದರಿಂದ ಮಕ್ಕಳ ವಿಕಸನಕ್ಕೆ ಹಾಗೂ ಬೆಳವಣಿಗೆಗೆ ತೊಡಕಾಗುವುದರ ಜೊತೆಯಲ್ಲಿ ಶಿಕ್ಷಣ ವಂಚಿತರಾಗುತ್ತಾರೆ ಇದೊಂದು ಅನಿಷ್ಠ ಪದ್ದತಿಯಾಗಿದ್ದು, ಸಮಾಜದಿಂದ ಇದನ್ನು ತೊಡೆದು ಹಾಕಲು ಎಲ್ಲಾ ಸಾರ್ವಜನಿಕರು ಕೈ ಜೋಡಿಸಬೇಕು ಎಂದರು.
ಜಿಲ್ಲೆಯ ವಿವಿಧ ಕೈಗಾರಿಕೆಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು, ಕಲ್ಲು ಕ್ವಾರಿಗಳು, ಜಲ್ಲಿ ಕ್ರಷರ್ ಗಳಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಬಳಸಿಕೊಳ್ಳುವ ಸಾಧ್ಯತೆಗಳಿದ್ದು ಇಂತಹ ಎಲ್ಲಾ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ತಿಳಿಸಿದರು.
ಸಮೀಕ್ಷೆಯನ್ನು ನವೆಂಬರ್ 1 ರಿಂದ ಜಿಲ್ಲೆಯಾದ್ಯಂತ ಏಕಕಾಲಕ್ಕೆ ಆರಂಭಿಸಿ ತಿಂಗಳ ಅಂತ್ಯದೊಳಗೆ ಮುಕ್ತ್ತಾಯಗೊಳಿಸಿ, ಸಮಗ್ರ ವರದಿಯನ್ನು ಸಲ್ಲಿಸುವಂತೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಮೀಕ್ಷಾ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುವಂತೆ ಅವರು ಸೂಚಿಸಿದರು.
ನವೆಂಬರ್ ತಿಂಗಳಲ್ಲಿ ಮಕ್ಕಳ ಗ್ರಾಮಸಭೆಗಳು ನಡೆಯಲಿದ್ದು, ಈ ಸಭೆಗಳಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ದತಿಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಬಾಲ ಕಾರ್ಮಿಕ ಮಕ್ಕಳನ್ನು ರಕ್ಷಿಸಲು ಹಾಗೂ ಪುರ್ನವಸತಿ ಕಲ್ಪಿಸಲು ತಾಲೂಕುವಾರು ವಿವಿಧ ಅಧಿಕಾರಿಗಳನ್ನು ನಿಯೋಜಿಸಿದ್ದು ಈ ಎಲ್ಲಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬಾಲ ಕಾರ್ಮಿಕರು ಕಂಡು ಬಂದಲ್ಲಿ ಅಗತ್ಯ ರಕ್ಷಣಾ ಕಾರ್ಯ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಅಪಾಯಕಾರಿ ಮತ್ತು ಅಪಾಯಕಾರಿಯಲ್ಲದ ಉದ್ದಿಮೆಗಳು ಸೇರಿದಂತೆ ಯಾವುದೇ ವಲಯಗಳಲ್ಲಿ ಬಾಲ ಮತ್ತು ಕಿಶೋರ ಕಾರ್ಮಿಕರ ಬಳಕೆಯನ್ನು ಸಂಪೂರ್ಣವಾಗಿ ಇಲ್ಲವಾಗಿಸಿ ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಬೇಕು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.