ಕೃಷಿ ಲಾಭದಾಯಕ ಮಾಡಲು ವಿವಿಧ ಯೋಜನೆ: ಸಚಿವೆ ಶೋಭಾ ಕರಂದ್ಲಾಜೆ

 ಕೃಷಿ ಲಾಭದಾಯಕ ಮಾಡಲು ವಿವಿಧ ಯೋಜನೆ: ಸಚಿವೆ ಶೋಭಾ ಕರಂದ್ಲಾಜೆ
Share this post

ಉಡುಪಿ, ಆಗಸ್ಟ್. 19, 2021: ಕೃಷಿ ಲಾಭದಾಯಕವಲ್ಲ ಎಂಬ ಕಾರಣದಿಂದ ಹಲವು ರೈತರು ತಮ್ಮ ಭೂಮಿಯನ್ನು ಹಡಿಲು ಬಿಡುತ್ತಿದ್ದು, ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಲು  ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು  ಜಾರಿಗೆ ತಂದಿದೆ. ರೈತರು ಈ ಯೋಜನೆಗಳ ಪ್ರಯೋಜನೆ ಪಡೆಯಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಇಂದು ಕಡೆಕಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಡಿಲು ಭೂಮಿ ಕೃಷಿ ಗದ್ದೆಗಳಲ್ಲಿನ ಕಳೆ ತೆಗೆಯುವ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.

ಸಣ್ಣ ಮತ್ತು ಮಧ್ಯಮ ರೈತರು ಕೃಷಿ ಚಟುವಟಿಕೆಗಳಿಂದ ವಿಮುಖರಾದಗಂತೆ ತಡೆಯಲು ಪ್ರಧಾನಮಂತ್ರಿಗಳು, ಯಂತ್ರೋಪಕರಣ ಬಾಡಿಗೆ, ಕೃಷಿ ಸಿಂಚಾಯಿ ಯೋಜನೆ ಮೂಲಕ ಹನಿ ನೀರಾವರಿ ಉತ್ತೇಜನ ಪ್ರಾರಂಭಿಸಿದ್ದಾರೆ. ರಸಗೊಬ್ಬರದ ಗುಣಮಟ್ಟದ ಏರಿಕೆ, ಪರಂಪರಾಗತ ಕೃಷಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿ, ಸಾವಯವ ಹಾಗೂ ನೈಸರ್ಗಿಕ ಕೃಷಿಗೆ ಆದ್ಯತೆ ನೀಡಲಾಗುತ್ತಿದೆ. ವಿದೇಶದಲ್ಲಿ ನೈಸರ್ಗಿಕವಾಗಿ ಬೆಳೆದ ಸಾವಯವ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ನಮ್ಮಲ್ಲಿ ಬೆಳೆದಂತಹ ಆಹಾರ-ಧಾನ್ಯಗಳನ್ನು ವಿದೇಶಕ್ಕೆ ರಫ್ತು ಮಾಡುವುದರಿಂದ ರೈತರಿಗೂ ಹೆಚ್ಚಿನ ಲಾಭಪಡೆಯಬಹುದು ಎಂದರು.

ಸಣ್ಣ ಕೃಷಿಕರು, ಭೂಮಿಯ ಒಡೆತನ ಹೊಂದಿರುವಂತಹಾ ಕೃಷಿಕರಿಗೆಲ್ಲರಿಗೂ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಪ್ರಧಾನಿಯವರು ವರ್ಷಕ್ಕೆ 6,000ರೂ.ಗಳನ್ನು ನೇರವಾಗಿ ಕೃಷಿಕರ ಖಾತೆಗೆ ಹಾಕುತ್ತಿದ್ದಾರೆ. ಇದನ್ನು ಕೃಷಿಯ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ತಿಳಿಸಿದರು.

 ಜಿಲ್ಲೆಯಲ್ಲಿ  ಕೃಷಿ ಉತ್ಪಾದಕ ಸಂಘಗಳನ್ನು  ಆರಂಭಿಸುವಂತೆ ತಿಳಿಸಿದ ಅವರು ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೆಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು ಯೋಜನೆಗಳ ಪ್ರಯೋಜನ ಪಡೆಯುವಂತೆ ಹೇಳಿದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯ ಬೆಳೆ ಸಮೀಕ್ಷೆ ಆ್ಯಪ್ ಬಳಕೆ ವಿಧಾನ ಮತ್ತು ಅದರ ಪ್ರಯೋಜನ ಕುರಿತು ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ರಘುಪತಿ ಭಟ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಸಹಾಯಕ  ನಿರ್ದೇಶಕ ಮೋಹನ್ ರಾಜ್, ಕೃಷಿ  ಇಲಾಖೆ ಹಾಗೂ ಬ್ರಹ್ಮಾವರ ಕೃಷಿ ಕೇಂದ್ರದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!