ಬಿಪಿಎಲ್‍ನಿಂದ ಎಪಿಲ್‍ಗೆ ಪರಿವರ್ತಿಸಲಾದ ಪಡಿತರ ಚೀಟಿಗಳ ಪುನರ್ ಮಂಜೂರಾತಿಗೆ ಪರಿಶೀಲನೆ

 ಬಿಪಿಎಲ್‍ನಿಂದ ಎಪಿಲ್‍ಗೆ ಪರಿವರ್ತಿಸಲಾದ ಪಡಿತರ ಚೀಟಿಗಳ ಪುನರ್ ಮಂಜೂರಾತಿಗೆ ಪರಿಶೀಲನೆ
Share this post

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ

ಮಂಗಳೂರು, ಜುಲೈ 05, 2021: ಜಿಲ್ಲೆಯಲ್ಲಿ ಬಿಪಿಎಲ್‍ನಿಂದ ಎಪಿಲ್‍ಗೆ ಪರಿವರ್ತಿಸಲಾದ ಪಡಿತರ ಚೀಟಿಗಳ ಪ್ರಕರಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಪರಿವರ್ತಿಸಲಾದ ಪಡಿತರ ಚೀಟಿದಾರರಿಗೆ ಆಹಾರ ವಿತರಣೆಗೆ ಸೂಕ್ತ ಕ್ರಮಕೈಗೊಳ್ಳುವ ಕುರಿತು ಪಡಿತರ ಚೀಟಿಗಳ ಪುನರ್ ಪರಿಶೀಲನೆ ಕುರಿತಂತೆ ಜು.5ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಆದಾಯ ಹೆಚ್ಚಿರುವ 3,526 ಫಲಾನುಭವಿಗಳ ಪೈಕಿ, 820 ಮಂದಿಗೆ ಮಾತ್ರ ಪಡಿತರ ರದ್ದು ಪಡಿಸಿದ್ದು, ಉಳಿದ 2,706 ಜನರ ಪಡಿತರ ತಡೆಹಿಡಿಯಬಾರದು ಎಂದು ಜಿಲ್ಲಾ ಉಸುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.  

ಪಡಿತರ ಚೀಟಿದಾರರ ಪೈಕಿ 1,595 ಜನರು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. 1.20 ಲಕ್ಷ ರೂ.ಗಳಿಗೂ ಹೆಚ್ಚು ಆದಾಯವಿರುವ 3,526 ಪಡಿತರದಾರರು ಸೇರಿದಂತೆ ಒಟ್ಟು 5,121 ಪ್ರಸ್ತುತ ಆದಾಯ ಹೆಚ್ಚಿರುವ ಹಿನ್ನಲೆಯಲ್ಲಿ ಪಡಿತರ ಆಹಾರ ಸೌಲಭ್ಯಗಳನ್ನು ಪಡೆಯಲಾಗದೇ ಆತಂಕದಲ್ಲಿರುವವರ ಬಗ್ಗೆ ಸಭೆಯಲ್ಲಿ ಗಹನವಾದ ಚರ್ಚೆ ನಡೆದು, ಆದಾಯ ಹೆಚ್ಚಿರುವ 3,526 ಫಲಾನುಭವಿಗಳ ಪೈಕಿ, 820 ಮಂದಿಗೆ ಮಾತ್ರ ಪಡಿತರ ರದ್ದು ಪಡಿಸಿದ್ದು, ಉಳಿದ 2,706 ಜನರ ಪಡಿತರ ತಡೆಹಿಡಿಯಬಾರದು ಎಂದು ಜಿಲ್ಲಾ ಉಸುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.  

ಆದಾಯ ತೆರಿಗೆ ಪಾವತಿದಾರರು ಆರ್ಥಿಕವಾಗಿ ಬಡವರಾಗಿದ್ದರೂ ಕೂಡ, ವಾಸಕ್ಕೆ ಮನೆ ನಿರ್ಮಿಸಿಕೊಳ್ಳಲು ಬ್ಯಾಂಕ್‍ನಿಂದ ಸಾಲಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ್ದು, ಅಂತಹವ ಪಡಿತರ ಚೀಟಿಯನ್ನು ಬಿಪಿಎಲ್‍ನಿಂದ ಎಪಿಎಲ್‍ಗೆ ಪರಿವರ್ತಿಸಬಾರದು ಎಂದು ಸಭೆಯಲ್ಲಿ ನಿರ್ಣಯಿಸಿದ ಹಿನ್ನಲೆಯಲ್ಲಿ, ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ರಮ್ಯಾ ಮಾತನಾಡಿ, ಈ ಬಗ್ಗೆ ವಿವರವಾದ ವರದಿಯನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಆಯುಕ್ತರಿಗೆ ಸಲ್ಲಿಸಿ ಅವರಿಂದ ಅನುಮತಿ ಪಡೆಯುವುದಾಗಿ ತಿಳಿಸಿದರು.

ಕಂದಾಯ ಇಲಾಖೆ ವರದಿ ಪ್ರಕಾರ 1.20 ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿರುವ ಪಡಿತರ ಚೀಟಿದಾರರ ಪೈಕಿ ಪ್ರತಿ ಗ್ರಾಮಲೆಕ್ಕಧಿಕಾರಿಗಳಿಂದ ವಿವರವಾದ ವರದಿಯನ್ನು ಕೂಡಲೇ ಪಡೆಯಬೇಕು, ವರದಿಯೊಂದಿಗೆ ಸಮಗ್ರ ಮಾಹಿತಿಯನ್ನು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಗಮನಕ್ಕೆ ತಂದು ಅನುಮತಿ ಪಡೆದು, ಅರ್ಹರಿಗೆ ಪಡಿತರ ನೀಡುವ ಬಗ್ಗೆ ಕ್ರಮಕೈಗೊಳ್ಳುವ ಕುರಿತು ಸಭೆಯಲ್ಲಿ ಸೂಚನೆ ನೀಡಲಾಯಿತು.

ಪಡಿತರ ಚೀಟಿ ಹೊಂದಿರುವವರಲ್ಲಿ ಆ ಕುಟುಂಬದ ಮುಖ್ಯಸ್ಥರು ಮರಣ ಹೊಂದಿದ್ದರೂ, ಇ-ತಂತ್ರಾಂಶದಲ್ಲಿ ಮರಣ ಹೊಂದಿದವರ ಹೆಸರನ್ನು ಬೇರ್ಪಡಿಸದ ಬಗ್ಗೆ ವರದಿಯಾಗಿದ್ದು, ಮೃತರ ಉತ್ತರಾಧಿಕಾರಿಗಳು ಪಡಿತರ ಚೀಟಿಯಲ್ಲಿ, ಮೃತಪಟ್ಟವರ ಹೆಸರನ್ನು ತೆಗೆದು ಹಾಕಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಶಾಸಕರಾದ ರಾಜೇಶ್ ನಾಯಕ್, ಉಮನಾಥ್ ಕೋಟ್ಯಾನ್ ಹಾಗೂ ಡಾ. ಭರತ್ ಶೆಟ್ಟಿಯವರು ಪಡಿತರಕ್ಕೂ ಹೆಚ್ಚಾಗಿ ಜನಸಾಮಾನ್ಯರು ಆರೋಗ್ಯಕ್ಕೆ ಸಂಬಂಧಿಸಿದಂತೆ ಬಿಪಿಎಲ್ ಪಡಿತರ ಚೀಟಿಯ ಅನಿವಾರ್ಯತೆ ಹೊಂದಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದ ಹಿನ್ನಲೆಯಲ್ಲಿ ಆಯುಷ್ಮಾನ್ ಆರೋಗ್ಯ ಕಾರ್ಡ್ ಸೌಲಭ್ಯಕ್ಕಾಗಿ ಈಗಾಗಲೇ ಬಿಪಿಎಲ್ ಪಡಿತರ ಚೀಟಿಗಾಗಿ ಆರ್ಜಿ ಸಲ್ಲಿಸಿದ್ದ 4000 ಮಂದಿಯ ಅರ್ಜಿ ಪರಿಶೀಲಿಸಿ ಕೂಡಲೇ ಬಿಪಿಎಲ್ ಪಡಿತರ ಚೀಟಿ ಪಡೆಯ ಅಗತ್ಯವೆನಿಸಿದರೆ ಮತ್ತೊಮ್ಮೆ ಜಿಲ್ಲೆಯ ಶಾಸಕರೊಂದಿಗೆ ಆಹಾರ ಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸುವುದಾಗಿ ಸಚಿವರು ತಿಳಿಸಿದರು.

ಯಾವುದೇ ಕಾರಣಕ್ಕೂ ತಾಂತ್ರಿಕ ಕಾರಣಗಳಿಗಾಗಿ ಬಡವರ ಪಡಿತರವನ್ನು ತಡೆಹಿಡಿಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಸಹಾಯಕ ಆಯುಕ್ತ ಮದನ್ ಮೋಹನ್, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ರಮ್ಯಾ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

Subscribe to our newsletter!

Other related posts

error: Content is protected !!