ಮೊಬೈಲ್ ನೆಟ್ವರ್ಕ್ ಸಮಸ್ಯೆ ಪರಿಹಾರ: ಸಿಎಂಗೆ ಸುರೇಶ್ ಕುಮಾರ್ ಮನವಿ
ಬೆಂಗಳೂರು, ಜೂನ್ 21, 2021: ಕೊರೋನಾ ಸಮಯದಲ್ಲಿ ಶಾಲಾ ಕಾಲೇಜು ತರಗತಿಗಳು ಆನ್ಲೈನ್ ಮೂಲಕ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಅಂತರ್ಜಾಲ ನೆಟ್-ವರ್ಕ್ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿ ಸಮೂಹ ತೊಂದರೆಗೊಳಗಾಗಿದ್ದು, ಅಂತರ್ಜಾಲ ನೆಟ್-ವರ್ಕ್ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ನೆಟ್-ವರ್ಕ್ ದೊರೆಯದೇ ಗ್ರಾಮೀಣ ಪ್ರದೇಶದ ಮಕ್ಕಳು ಬೆಟ್ಟ ಗುಡ್ಡಗಳನ್ನು ಹತ್ತಿ ಕುಳಿತು ಆನ್-ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಮಳೆಗಾಲವಾದ್ದರಿಂದ ಬೆಟ್ಟದ ಮೇಲೆ ಕುಳಿತು ಪಾಠದಲ್ಲಿ ತೊಡಗಿಸಿಕೊಂಡ ಮಕ್ಕಳನ್ನು ಮಳೆಯಿಂದ ರಕ್ಷಿಸಲು ಪೋಷಕರು ಛತ್ರಿ ಹಿಡಿದು ಮಳೆಯಲ್ಲಿ ನಿಂತುಕೊಂಡ ಫೋಟೋಗಳು ಪತ್ರಿಕೆಗಳಲ್ಲಿ ಮತ್ತು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ನೆಟ್-ವರ್ಕ್ ಸಮಸ್ಯೆಗೆ ಕೊನೆ ಹಾಡಲು ನೆಟ್-ವರ್ಕ್ ಆಪರೇಟರ್ ಗಳ ಸಭೆ ನಡೆಸಿ ಪರಿಹಾರ ರೂಪಿಸಬೇಕೆಂದು ಅವರು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇಂದಿನ ಸಂದರ್ಭವನ್ನು ಗಮನಿಸಿದರೆ ಈ ಕೋವಿಡ್ ಕಾಲಘಟ್ಟದಲ್ಲಿ ಆನ್-ಲೈನ್ ತರಗತಿಗಳೇ ಸಾಮಾನ್ಯವಾಗಬಹುದಾಗಿದೆ. ಕೋವಿಡ್ ಪೂರ್ವದ ಸಹಜ ಸಾಮಾಜಿಕ ಸ್ಥಿತಿಗತಿಗಳು ಸದ್ಯಕ್ಕೆ ಹಿಂದಿರುಗಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಈ ಹೊಸ ಸ್ಥಿತಿಗೆ ಹೊಂದಿಕೊಳ್ಳದೇ ಅನ್ಯದಾರಿಯಿಲ್ಲವಾದ್ದರಿಂದ ನಾವು ಅಂತರ್ಜಾಲ ನೆಟ್-ವರ್ಕ್ ಸಮಸ್ಯೆಯನ್ನು ಪರಿರಿಸಿಕೊಳ್ಳಲೇಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.
ತರಗತಿ ಕಲಿಕೆ ಮರೀಚಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಆನ್-ಲೈನ್ ಬೋಧನೆ ಅನಿವಾರ್ಯವಾಗಿದೆ. ತರಗತಿಗಳಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕಾದ ಮಕ್ಕಳು ಅಂತರ್ಜಾಲದ ಮೊರೆಹೋಗಬೇಕಾಗಿದೆ. ಶಿಕ್ಷಣ ಇಲಾಖೆ ತಂತ್ರಜ್ಞಾನಾಧಾರಿತವಾದ ಶಿಕ್ಷಣ ವ್ಯವಸ್ಥೆಗೆ ನಿಯಂತ್ರಣವನ್ನು ಕಲ್ಪಿಸುವ ನೀತಿಯನ್ನು ಹೊರತಂದಿದ್ದರೂ ಸಹ ಮಕ್ಕಳ ಕಲಿಕೆಗೆ ಪರ್ಯಾಯ ಬೋಧನೆ ಅವಶ್ಯಕವೂ ಆಗಿದೆ. ಹಾಗಾಗಿ ಶಾಲೆಗಳು ತಮ್ಮದೇ ಸಂಪನ್ಮೂಲಗಳ ಆಧಾರದಲ್ಲಿ ಆನ್-ಲೈನ್ ಕಲಿಕೆಯನ್ನು ನಡೆಸಲು ಇಲಾಖೆ ಅನುಮತಿ ನೀಡಿದೆ. ಸರ್ಕಾರಿ ಶಾಲೆಗಳ ಶಿಕ್ಷಕರು, ಮೊಬೈಲ್ ವಾಟ್ಸಪ್ ಗ್ರೂಪ್ಗಳ ಮೂಲಕವೂ ಮಕ್ಕಳನ್ನು ಕಲಿಕೆಗೆ ತೊಡಗಿಸಿಕೊಳ್ಳಲಾಗುತ್ತಿದೆ. ನಮ್ಮದೇ ಯೂ-ಟ್ಯೂಬ್ ಚಾನೆಲ್ಗಳ ಮೂಲಕವೂ ದೂರದರ್ಶನದ ಚಂದನವಾಹಿನಿಯ ಮೂಲಕವೂ ಪಾಠ ಪ್ರವಚನಗಳು ಮುಂದುವರೆಯಲಿರುವುದರಿಂದ ಹೊಸ ಸ್ಥಿತಿಗೆ ಹೊಂದಿಕೊಳ್ಳಲೇಬೇಕಿದೆ ಎಂದು ಸಚಿವರು ಹೇಳಿದ್ದಾರೆ.
ಮೊಬೈಲ್ ನೆಟ್-ವರ್ಕ್ ಸಿಗದೇ ವಿದ್ಯಾರ್ಥಿನಿಯೊಬ್ಬಳು ಮೊಬೈಲ್ ಕಲಿಕಾ ಪ್ರಯತ್ನದಲ್ಲಿ ಮೊಬೈಲ್ ನೆಟ್-ವರ್ಕ್ ದೊರೆಯದೇ ಗುಡ್ಡದ ಮೇಲೆ ಮಳೆ ಹನಿಯಲ್ಲಿ ಪುಸ್ತಕ ಮತ್ತು ಮೊಬೈಲ್ ಹಿಡಿದು ಹತಾಶಳಾಗಿ ಕುಳಿತ ದೃಶ್ಯವೊಂದನ್ನು ಉಲ್ಲೇಖಿಸಿರುವ ಸಚಿವರು, ಆನ್-ಲೈನ್ ಶಿಕ್ಷಣ ಅನಿವಾರ್ಯವಾಗುತ್ತಿರುವ ಈ ದಿನಮಾನಗಳಲ್ಲಿ ವಿಶೇಷ ನೀತಿನಿರೂಪಣೆ ಮಾಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ನೆಟ್-ವರ್ಕ್ ಆಪರೇಟರ್ ಗಳ ಸಭೆಯನ್ನು ಶೀಘ್ರವೇ ಆಯೋಜಿಸಿ ಸಮರೋಪಾದಿಯಲ್ಲಿ ನೆಟ್-ವರ್ಕ್ ಸಮಸ್ಯೆಯನ್ನು ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಸುರೇಶ್ ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಮಸ್ಯೆ ಪರಿಹಾರವಾದರೆ ನಮ್ಮ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಸಕಾರದ ಜವಾಬ್ದಾರಿಯ ನಿರ್ವಹಣೆ ಪರಿಣಾಮಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.